ಹಳೆ ವಿದ್ಯಾರ್ಥಿಗಳೊಂದಿಗೆ ಗಿರಿ ದೇವನೂರು ಸಂವಾದ ಸರಣಿ

KannadaprabhaNewsNetwork | Published : May 2, 2025 11:46 PM

ಸಾರಾಂಶ

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ಸ್‌ಗೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ಹೆಚ್ಚಿನ ಒತ್ತು ನೀಡಬೇಕು ಎಂದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಮತ್ತು ರೀ ಆಲ್ಫಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿ ದೇವನೂರು ಅವರು ಸಲಹೆ ನೀಡಿದರು. ಕಂಪ್ಯೂಟರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರು ಕೃತಕ ಬುದ್ಧಿಮತ್ತೆ ಹಾಗೂ ಮೆಕ್ಯಾನಿಕಲ್‌ನಂತಹ ಕೋರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರು ರೋಬೋಟಿಕ್ಸ್ ಮೇಲೆ ಗಮನ ಕೇಂದ್ರೀಕರಿಸುವುದು ಸೂಕ್ತ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ಸ್‌ಗೆ ಸಂಬಂಧಿಸಿದ ವಿಷಯಗಳನ್ನು ಅರಿಯಲು ಹೆಚ್ಚಿನ ಒತ್ತು ನೀಡಬೇಕು ಎಂದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಮತ್ತು ರೀ ಆಲ್ಫಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿ ದೇವನೂರು ಅವರು ಸಲಹೆ ನೀಡಿದರು.

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಎಂಇ-ರೈಸ್ ಫೌಂಡೇಶನ್ ವತಿಯಿಂದ ಪ್ರಾರಂಭಿಸಿರುವ ಹಳೆ ವಿದ್ಯಾರ್ಥಿಗಳೊಂದಿಗಿನ ಸಂವಾದ ಸರಣಿಯ ಮೊದಲ ಸಂಚಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಂಪ್ಯೂಟರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರು ಕೃತಕ ಬುದ್ಧಿಮತ್ತೆ ಹಾಗೂ ಮೆಕ್ಯಾನಿಕಲ್‌ನಂತಹ ಕೋರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರು ರೋಬೋಟಿಕ್ಸ್ ಮೇಲೆ ಗಮನ ಕೇಂದ್ರೀಕರಿಸುವುದು ಸೂಕ್ತ ಎಂದು ತಿಳಿಸಿದರು.ಕೃತಕ ಬುದ್ಧಿಮತ್ತೆ ಹೊಸ ವಿಷಯವೇನಲ್ಲ. ೧೯೯೦ರಲ್ಲಿಯೇ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ವೆಂಕಟೇಶಮೂರ್ತಿ ಅವರು ನಮಗೆ ಕೃತಕ ಬುದ್ಧಿಮತ್ತೆ ವಿಷಯ ಬೋಧಿಸಿದ್ದರು. ಇಂದು ಅದರ ಬಳಕೆ ವ್ಯಾಪಕವಾಗುತ್ತಿದೆ ಎಂದರು.ಪ್ರೋಗ್ರಾಮಿಂಗ್ ಕೆಲಸಗಳು ಎಸ್‌ಟಿಡಿ/ಐಎಸ್‌ಡಿ ಬೂತ್‌ಗಳಿದ್ದ ಹಾಗೆ. ಈಗ ಪ್ರಚಲಿತದಲ್ಲಿದ್ದರೂ ಮುಂಬರುವ ದಿನಗಳಲ್ಲಿ ಇನ್ನಿಲ್ಲವಾಗಬಹುದು ಎಂದು ಹೇಳಿದರು. ವಿದ್ಯಾರ್ಥಿಯಾಗಿದ್ದಾಗ ಕಾಲೇಜು ಗ್ರಂಥಾಲಯದಲ್ಲಿ ಇಂಗ್ಲಿಷ್ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಓದುತ್ತಿದ್ದೆ. ಅದು ನನಗೆ ಅಮೆರಿಕಕ್ಕೆ ತೆರಳಿ ಉದ್ಯಮಿಯಾಗಲು ಪ್ರೇರಣೆ ಒದಗಿಸಿತು ಎಂದು ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಿದರು.ಸಂವಾದ ಕಾರ್ಯಕ್ರಮದ ಸಂಯೋಜಕರಾದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಕಾರ್ಪೊರೇಟ್ ವಿಷಯಗಳಿಗೆ ಸಂಬಂಧಿಸಿದ ಡೀನ್ ಡಾ.ಗೀತಾ ಕಿರಣ್ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಕೃಷ್ಣಸ್ವಾಮಿ ಸುಬ್ಬಾರಾವ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂವಾದದ ಭಾಗವಾಗಿ ಗಿರಿ ದೇವನೂರು ಅವರು ನೀಡಿದ ಉಪನ್ಯಾಸ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.

Share this article