ಹಳಿಯಾಳ: ಶಾಲೆಯ ಶೌಚಾಲಯ(ಮೂತ್ರಾಲಯ)ದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಪಂ ವ್ಯಾಪ್ತಿಯ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.
2ನೇ ತರಗತಿ ಓದುತ್ತಿದ್ದ ಸಾನ್ವಿ ಬಸವರಾಜ ಗೌಳಿ(8) ಎಂಬವಳೇ ಮೃತಪಟ್ಟ ಬಾಲಕಿ. ಈಕೆ ಬೆಳಗ್ಗೆ ಲಘು ವಿರಾಮದ ವೇಳೆ ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ತೆರಳಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿಯ ಸಾವಿಗೆ ಕಾರಣವಾಗಿರುವ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಟುಂಬದವರು, ಸಾರ್ವಜನಿಕರು ಆಗ್ರಹಿಸಿದರು.ನತದೃಷ್ಟ ಬಾಲಕಿ: ಮೃತ ಬಾಲಕಿ ಸಾನ್ವಿಯ ತಂದೆ ಬಸವರಾಜ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ಸಾನ್ವಿಯನ್ನು ಅವಳ ತಾಯಿಯು ತನ್ನ ತವರು ಹಾವೇರಿಗೆ ಕರೆದುಕೊಂಡು ಹೋಗಿದ್ದರಂತೆ. ಈ ವರ್ಷ ಸಾನ್ವಿಯನ್ನು ಅವಳ ಅಜ್ಜಿಯು ಮುಂಡವಾಡಕ್ಕೆ ಕರೆತಂದು ಎರಡನೇ ತರಗತಿಗೆ ದಾಖಲಿಸಿದ್ದರು. ಬಾಲಕಿ ಕಲಿಯುತ್ತಿರುವ ಶಾಲೆಯ ಆವರಣದಲ್ಲಿ ಬೋರ್‌ವೆಲ್ ಕೊರೆಯಲಾಗಿದ್ದು, ಅದಕ್ಕೆ ಇನ್ನೂ ವಿದ್ಯುತ್ ಜೋಡಣೆ ನೀಡಿಲ್ಲ. ಅನಧಿಕೃತವಾಗಿ ವಿದ್ಯುತ್ ಜೋಡಣೆ ಮಾಡಿ ಶಾಲೆಯವರು ನೀರನ್ನು ಬಳಸುತ್ತಿದ್ದರಂತೆ.ಗುರುವಾರ ಈ ವಿದ್ಯುತ್ ತಂತಿ ಆಕಸ್ಮಿಕವಾಗಿ ಹರಿದು ಶಾಲೆಯ ಮೂತ್ರಾಲಯದ ಗೋಡೆಯ ಮೇಲೆ ಬಿದ್ದಿತ್ತೆನ್ನಲಾಗಿದೆ. ಆಗ ಮೂತ್ರ ವಿಸರ್ಜನೆಗೆ ತೆರಳಿದ ಸಾನ್ವಿಗೆ ತಂತಿ ತಗುಲಿ ಬಲಿ ತೆಗೆದುಕೊಂಡಿದೆ. ಅಕ್ರಮ ಜೋಡಣೆ?: ಶಾಲೆಯ ಪ್ರಭಾರ ಮುಖ್ಯೋಧ್ಯಾಪಕ ತುಕಾರಾಮ ಕಲಕೇರಿ ಮಾತನಾಡಿ, ಕಳೆದ ಆರೆಳು ವರ್ಷಗಳ ಹಿಂದೆ ಶಾಲೆಗೆ ಬೋರ್‌ವೆಲ್ ಕೊರೆಯಲಾಗಿದ್ದು, ಶಾಲೆಗೆ ಹಸ್ತಾಂತರಿಸಲಿಲ್ಲವೆಂದಿದ್ದಾರೆ. ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ ಮಾತನಾಡಿ, ಸರ್ಕಾರದ ಆದೇಶದಂತೆ ಹಾಗೂ ಹೆಸ್ಕಾಂ ಸೂಚಿಸಿದಂತೆ ಶಾಲೆಯ ಆವರಣದಲ್ಲಿ ಹಾಗೂ ಶಾಲೆಯ ಮೇಲಿಂದ ಹಾದು ಹೋಗುವ ವಿದ್ಯುತ್ ತಂತಿಯಾಗಲಿ ಹಾಗೂ ಸ್ಥಾವರಗಳನ್ನು ಮಕ್ಕಳಿಗೆ ಕೈಗೆ ಎಟುಕದಂತೆ ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಿನಲ್ಲಿ 71 ಶಾಲೆಗಳಲ್ಲಿ ವಿದ್ಯುತ್ ತಂತಿ ಹಾಗೂ ಸ್ಥಾವರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇಂತಹ ಶಾಲೆಗಳಿದ್ದರೆ ಹೆಸ್ಕಾಂ ಇಲಾಖೆಯ ಗಮನಕ್ಕೆ ತರಬೇಕೆಂದು ಶಿಕ್ಷಣ ಇಲಾಖೆಗೆ ಪತ್ರ ಬರೆದು ತಿಳಿಸಿದ್ದೇವೆ. ಮುಂಡವಾಡ ಶಾಲೆಯಲ್ಲಿ ಬೋರ್‌ವೆಲ್ ಕೊರೆದ ಬಗ್ಗೆ ಹಾಗೂ ಅಕ್ರಮವಾಗಿ ವಿದ್ಯುತ್ ಜೋಡಣೆ ಕೈಗೊಂಡ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.
ದೇಶಪಾಂಡೆ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಅವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಬಾಲಕಿಯ ಅಂತಿಮ ದರ್ಶನ ಪಡೆದು, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹಳಿಯಾಳ ತಹಸೀಲ್ದಾರ್ ಪ್ರವೀಣಕುಮಾರ ಹುಚ್ಚಣ್ಣನವರ, ಸಿಪಿಐ ಜಯಪಾಲ್ ಪಾಟೀಲ, ಡಿಡಿಪಿಐ ಬಸವರಾಜ ಪಾರಿ ಭೇಟಿ ನೀಡಿ ಪರಿಶೀಲಿಸಿದರು.