ಮಡಿಕೇರಿ : ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಒಳಪಟ್ಟ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಕೆ.ಸಿಂಚನ, ಯೋಗಾಸನದ ಮೂರು ಪ್ರಕಾರಗಳಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಶಾಲೆ ಆವರಣದಲ್ಲಿ ‘ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತನ್ನ ಹೆಸರನ್ನು ದಾಖಲಿಸಿ ಅಪೂರ್ವ ಸಾಧನೆ ಗೈದಿದ್ದಾಳೆ.
ಈ ಸಂದರ್ಭ ಡಾ.ಮನೀಶ್ ಬಿಷ್ಣೋಯ್ ಅವರು, ‘ಡಿಂಪಾಸನ’ದಲ್ಲಿ 14 ಮೀಟರ್ ಅನ್ನು ಕ್ರಮಿಸುವ ಮೂಲಕ ಸಿಂಚನ ತನ್ನ ಹೆಸರಿನಲ್ಲೇ ಇದ್ದ 10 ಮೀಟರ್ ದಾಖಲೆಯನ್ನು ಮುರಿದು ವಿಶ್ವ ದಾಖಲೆ ಮಾಡಿದ್ದಾಳೆ. ‘ಉರಭ್ರಾಸನ’ದಲ್ಲಿ 1.04 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಹಾಗೂ ‘ಮೃಗ ಮುಖಾಸನ’ದಲ್ಲಿ 1.45 ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಈಕೆ ಏಕ ಕಾಲದಲ್ಲಿಯೇ ವಿಶ್ವ ದಾಖಲೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದಾಗಿ ಘೋಷಿಸಿದರು.
ಒಂದೇ ಬಾರಿಗೆ 3 ‘ವಿಶ್ವ ದಾಖಲೆ’ಯುಎಸ್ ಅನ್ನು ಮುಖ್ಯ ನೆಲೆಯನ್ನಾಗಿ ಹೊಂದಿರುವ ‘ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆ ವಿಶ್ವದ ಅಪರೂಪದ ವಿದ್ಯಮಾನಗಳನನ್ನು ದಾಖಲಿಸಿಕೊಂಡು ಬರುತ್ತಿದೆ. 11 ವರ್ಷದ ಬಾಲಕಿ ಒಂದೇ ಬಾರಿಗೆ ಮೂರು ವಿಶ್ವ ದಾಖಲೆ ಮಾಡಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನ ಎಂದು ಡಾ. ಮನೀಶ್ ಬಿಷ್ಣೋಯ್ ಅಭಿಪ್ರಾಯಿಸಿದರು. ಯೋಗಾಸನದಲ್ಲಿ 3 ವಿಶ್ವ ದಾಖಲೆ ಮಾಡಿದ್ದಕ್ಕಾಗಿ ಡಾ. ಮನೀಶ್ ಬಿಷ್ಣೋಯ್ ಅವರು ಬಿ.ಕೆ. ಸಿಂಚನಗಳಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.ನಮ್ಮ ಹೆಮ್ಮೆ:
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಇದೊಂದು ಅಪರೂಪದ ಕ್ಷಣ. ಸಿಂಚನಳ ವಿಶ್ವ ದಾಖಲೆ ಈ ನಾಡಿಗೆ, ರಾಜ್ಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಯೋಗಾಸನವನ್ನು ಇಡೀ ವಿಶ್ವಕ್ಕೆ ‘ಯೋಗ ದಿನ’ ಆರಂಭದ ಮೂಲಕ ಪ್ರಧಾನಿ ಮೋದಿ ಅವರು ಪರಿಚಯಿಸಿದ್ದು, ಇದನ್ನು ಟೀಕಿಸುತ್ತಿದ್ದವರು ಇಂದು ಯೋಗಾಸನಕ್ಕೆ ಮಾರು ಹೋಗಿದ್ದಾರೆ. ಯೋಗಾಸನದ ಮೂಲಕ ಆರೋಗ್ಯದೊಂದಿಗೆ ಏಕಾಗ್ರತೆಯನ್ನು ಕಂಡುಕೊಳ್ಳಲು ಸಾಧ್ಯವಿದ್ದು, ಪ್ರತಿಯೊಬ್ಬರು ಇದರತ್ತ ಆಸಕ್ತರಾಗುವಂತೆ ಕರೆ ನೀಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಬಾಲಕಿಯ ಸಾಧನೆಗೆ ಶುಭ ಹಾರೈಸಿದರು.ವಿಶೇಷ ಕಾರ್ಯಕ್ರಮದಲ್ಲಿ ಸಿಂಚನಳ ತಾಯಿ ರೇಣುಕ, ತಂದೆ ಬಿ.ಸಿ.ಕೀರ್ತಿಕುಮಾರ್ ಹಾಗೂ ವೇದಿಕೆಯಲ್ಲಿ ಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ ಬಿ.ಆರ್.ಜೋಯಪ್ಪ, ಡಿಡಿಪಿಐ ರಂಗಧಾಮಪ್ಪ, ನಿವೃತ್ತ ಉಪನ್ಯಾಸಕ ಶಿವರಾಂ, ಆಯುಷ್ ಇಲಾಖೆಯ ಡಾ.ಅರುಣ್ ಉಪಸ್ಥಿತರಿದ್ದರು. ಇದೇ ಸಂದರ್ಭ ಅತಿಥಿ ಗಣ್ಯರನ್ನು ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.