ಹುಬ್ಬಳ್ಳಿ: ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ 5 ವರ್ಷದ ಬಾಲಕಿ ಆಧ್ಯಾ ಸಾಯಿ ಅಂತ್ಯಸಂಸ್ಕಾರ ಇಲ್ಲಿನ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಸೋಮವಾರ ಶೋಕಸಾಗರದ ಮಧ್ಯೆ ನೆರವೇರಿತು.
ತಾಲೂಕು ದಂಡಾಧಿಕಾರಿ ಆರ್.ಕೆ. ಪಾಟೀಲ ಸಮ್ಮುಖದಲ್ಲಿ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡ, ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಅಲ್ಲಿಂದ ಮೆರವಣಿಗೆ ಮೂಲಕ ಸಂತೋಷನಗರದಲ್ಲಿನ ತಮ್ಮ ಬಾಡಿಗೆ ಮನೆಗೆ ತೆಗೆದುಕೊಂಡು ಬಂದ ಕುಟುಂಬಸ್ಥರು, ಅಲ್ಲಿ ಕೆಲಕಾಲ ಅಂತಿಮ ದರ್ಶನಕ್ಕಿಟ್ಟು ಬಳಿಕ ದೇವಾಂಗಪೇಟೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಹಾಲುಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನ ಪೂರೈಸಿದ ಬಾಲಕಿಯ ತಂದೆ ಶರಣಪ್ಪ ಕುರಿ, ಅಗ್ನಿ ಸ್ಪರ್ಶಿಸಿದರು.
ಮಗಳನ್ನು ಕಳೆದುಕೊಂಡ ಶರಣಪ್ಪ- ಲತಾ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳೆ ಮಗಳೆ ಎಂದು ರೋಧಿಸುತ್ತಿದ್ದ ಅವರಿಗೆ ಅಲ್ಲಿ ನೆರೆದಿದ್ದವರೆಲ್ಲ ಎಷ್ಟೇ ಸಾಂತ್ವನ ಹೇಳಿದರೂ ಹೆತ್ತ ಕರುಳು ಹಲುಬುತ್ತಲೇ ಇತ್ತು. ಇದನ್ನು ಕಂಡ ನೆರೆದವರ ಕಣ್ಣಾಲಿಗಳು ತೆವವಾಗಿದ್ದವು.ಪುಟ್ಟ ಜೀವಕ್ಕೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಸಾರ್ವಜನಿಕರು ಕಣ್ಣೀರಿಟ್ಟರು. ಕೊಪ್ಪಳ ಜಿಲ್ಲೆಯಿಂದ ಸಂಬಂಧಿಕರು ಆಗಮಿಸಿದ್ದರು. ಜತೆಗೆ ನಗರದ ಜನತೆ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕ್ಷಮಿಸು ಮಗಳೇ..!
ಆಗಂತುಕನ ನೀಜಕೃತ್ಯಕ್ಕೆ ಬಲಿಯಾದ ಬಾಲೆಯ ತಂದೆ ಶರಣಪ್ಪ ಕುರಿ ಹೀಗೆ ರೋಧಿಸುತ್ತಿದ್ದರೆ, ನೆರೆದಿದ್ದವರ ಎದೆಯಲ್ಲಿ ಬಿಸಿನೀರ ಕುದಿ.
ಕೊಪ್ಪಳದಿಂದ ಬಂದಿದ್ದ ನೆಂಟರಿಸ್ಟರು, ಬಡವರ ಮನೆಯ ಹೆಣ್ಣಾಗಿ ಹುಟ್ಟಬಾರದು ಎಂದು ನಿಟ್ಟುಸಿರು ಹಾಕುತ್ತಿದ್ದರು. ಬಾಲಕಿಗೆ ಆದ ಅನ್ಯಾಯ ಮತ್ತೆ ಯಾರಿಗೂ ಆಗಬಾರದು. ಸರ್ಕಾರ ಕ್ರಮ ಕೈಗೊಳ್ಳಬೇಕ್ರಿ ಎಂದು ರೋದಿಸುತ್ತಲೇ ಆಗ್ರಹಿಸುತ್ತಿದ್ದರು.