ಶಾಲೆಗಳಲ್ಲಿನ್ನು ಬಾಲಕಿಯರ ಮುಟ್ಟಿನ ಮಾಹಿತಿ ಸಂಗ್ರಹ!

KannadaprabhaNewsNetwork |  
Published : Aug 12, 2026, 01:15 AM IST
ಮುಟ್ಟು | Kannada Prabha

ಸಾರಾಂಶ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿನಿಯರ ಋತುಚಕ್ರ ಮಾಹಿತಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದ ಕೆಲವು ಕಡೆ ಅಪ್ರಾಪ್ತ ಶಾಲಾ ಬಾಲಕಿಯರು ಗರ್ಭ ಧರಿಸುವ ದುರದೃಷ್ಟ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಚಕ್ರದ ಮಾಹಿತಿ ಹಾಗೂ ಗರ್ಭಧಾರಣೆಯ ಸಾಧ್ಯತೆ ಕುರಿತು ಆರೋಗ್ಯ ಸಿಬ್ಬಂದಿ ಗಮನಹರಿಸಬೇಕು ಎಂಬ ಮಹತ್ವದ ಸೂಚನೆಯನ್ನು ಆರೋಗ್ಯ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿನಿಯರ ಋತುಚಕ್ರ ಮಾಹಿತಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ.ಶಾಲಾ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ವೇಳೆ ಗರ್ಭಧಾರಣೆ ಸಂಬಂಧಿತ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ 2026–27ನೇ ಸಾಲಿನ ಶಾಲಾ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಹೊರಡಿಸಿರುವ ಸೂಚನಾ ಪತ್ರದಲ್ಲಿ, ವಿದ್ಯಾರ್ಥಿಗಳಲ್ಲಿನ ಜನ್ಮಜಾತ ದೋಷ, ಪೌಷ್ಟಿಕಾಂಶ ಕೊರತೆ, ರೋಗಗಳು ಹಾಗೂ ಬೆಳವಣಿಗೆಯ ವಿಳಂಬ ಪರೀಕ್ಷೆಯ ಜತೆಗೆ ಪ್ರೌಢಶಾಲಾ ವಿದ್ಯಾರ್ಥಿನಿಯರ ಆರೋಗ್ಯದ ಮೇಲೂ ವಿಶೇಷ ಗಮನಹರಿಸುವಂತೆ ತಿಳಿಸಲಾಗಿದೆ.

ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಚಕ್ರ ನಿಂತಿರುವ ಸಂದರ್ಭ ಹಾಗೂ ಗರ್ಭಧಾರಣೆಯ ಸಾಧ್ಯತೆ ಕುರಿತು ಆರೋಗ್ಯ ಸಿಬ್ಬಂದಿ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ನಿಗದಿತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಪ್ರಕಾರ ಪರೀಕ್ಷೆ ನಡೆಸಬೇಕು. ಅನುಮಾನಾಸ್ಪದ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಉನ್ನತ ಆರೋಗ್ಯ ಕೇಂದ್ರಗಳಿಗೆ ರೆಫರ್ ಮಾಡಿ, ನಂತರದ ಫಾಲೋ-ಅಪ್ ನಡೆಸುವಂತೆಯೂ ಸೂಚಿಸಲಾಗಿದೆ.ಬಾಲ ಗರ್ಭಧಾರಣೆ ಪತ್ತೆಗೆ ಕ್ರಮ:

ಬಾಲ್ಯವಿವಾಹ, ಬಾಲ ಗರ್ಭಧಾರಣೆ ಹಾಗೂ ಸಾಧ್ಯವಾದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ವಿದ್ಯಾರ್ಥಿನಿಯರ ಆರೋಗ್ಯ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಸೂಕ್ಷ್ಮ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದರಿಂದ, ಮಾಹಿತಿ ಗೌಪ್ಯತೆ ಕಾಪಾಡುವುದು ಮತ್ತು ನಿಗದಿತ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸುವುದು ಪ್ರಮುಖವಾಗಲಿದೆ.ಪ್ರತ್ಯೇಕ ರಿಜಿಸ್ಟರ್‌:

ಇತ್ತೀಚೆಗೆ ರಾಜ್ಯದಲ್ಲಿ ಬಾಲ ಗರ್ಭಧಾರಣೆ ಪ್ರಕರಣಗಳ ಕುರಿತು ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಜುಲೈ ಅಂತ್ಯದಲ್ಲಿಯೇ ಋತುಚಕ್ರ ಮಾಹಿತಿ ಸಂಗ್ರಹ ಕುರಿತು ಸೂಚನೆ ನೀಡಿದೆ. ಇದರ ಅನುಸಾರ ವಿವಿಧ ಶಾಲೆಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಕೆಲವು ಶಾಲೆಗಳಲ್ಲಿ ಇದಕ್ಕಾಗಿ ಪ್ರತ್ಯೇಕ ರಿಜಿಸ್ಟರ್‌ ಇಡಲಾಗಿದೆ. ಇನ್ನು ರಾಜ್ಯಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಶಾಲಾ ಹಂತದಲ್ಲಿ ಈ ಪ್ರಕ್ರಿಯೆಯನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸುತ್ತವೆ ಎಂಬುದು ಗಮನಾರ್ಹವಾಗಿದೆ.

ಶಿಕ್ಷಕರಿಗೂ ಮಹತ್ವದ ಜವಾಬ್ದಾರಿ:ಶಿಕ್ಷಣ ಇಲಾಖೆ ಕೂಡ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ಶಿಕ್ಷಕರಿಗೆ ಸೂಚನೆ ನೀಡಿದೆ. ವಿದ್ಯಾರ್ಥಿನಿಯರ ಋತುಚಕ್ರದ ಬಗ್ಗೆ ಗಮನಿಸಬೇಕು. ಋತುಚಕ್ರ ನಿಲ್ಲುವುದು ಅಥವಾ ಅನಿಯಮಿತವಾಗಿರುವುದನ್ನು ಗಮನಿಸಬೇಕು. ಅಗತ್ಯವಿದ್ದಲ್ಲಿ ಆರೋಗ್ಯ ಸಿಬ್ಬಂದಿಯ ಗಮನಕ್ಕೆ ತರಬೇಕು. ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಕಾಪಾಡಿಕೊಂಡು ಅನುಮಾನಾಸ್ಪದ ಪ್ರಕರಣಗಳನ್ನು ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡಬೇಕು. ಕೆಲವು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರ ಋತುಚಕ್ರದ ಮಾಹಿತಿಗಾಗಿಯೇ ಪ್ರತ್ಯೇಕ ರಜಿಸ್ಟರ್ ಕೂಡ ಮಾಡಲಾಗಿದೆ. ಹದಿಹರೆಯದಲ್ಲಿ ದಾರಿ ತಪ್ಪಿ ಆಗುವ ಅನಾಹುತ ತಪ್ಪಿಸಲು ಇದು ಮಹತ್ವದ ಹೆಜ್ಜೆ ಎನಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದು ಕಡ್ಡಾಯ
ಕೈ ಮುಗಿತಿವಿ, ಸಾಮಾಜಿಕ ಬಹಿಷ್ಕಾರ ತೆರವುಗೊಳಿಸಿ