ಹೆಣ್ಣು ಮಕ್ಕಳಿಗೆ ಸುರಕ್ಷತೆ ಅಗತ್ಯ: ಸಂಸದೆ

KannadaprabhaNewsNetwork | Published : Sep 13, 2024 1:31 AM

ಸಾರಾಂಶ

ದಾವಣಗೆರೆಯಲ್ಲಿ ನಡೆದ ನಾರಿ ಶಕ್ತಿ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹುಬ್ಬಳ್ಳಿ, ಪಶ್ಚಿಮ ಬಂಗಾಳದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಹತ್ಯೆಯಂತಹ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಜೊತೆಗೆ ಹೆಚ್ಚಿನ ಸುರಕ್ಷತೆ ಕಲ್ಪಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾರಿ ಶಕ್ತಿ ಕಾರ್ಯಕ್ರಮ ಉದ್ಘಾಟಿಸಿ, ಸುರಕ್ಷಾ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರ ಆತ್ಮರಕ್ಷಣೆಗಾಗಿ ನಾರಿಶಕ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಹಿಳೆಯರಿಗೆ ರಕ್ಷಣೆಯಷ್ಟೇ ಅಲ್ಲ, ಹೆಚ್ಚಿನ ಸುರಕ್ಷತೆಯ ಅಗತ್ಯವೂ ಇದೆ ಎಂದರು.

ಹೆಣ್ಣು ಮಕ್ಕಳ ಸಹಾಯಕ್ಕಾಗಿ ಸಹಾಯವಾಣಿ, ಕಾನೂನಿನಲ್ಲಿರುವ ಸುರಕ್ಷತೆಯ ಜೊತೆಗೆ ಆತ್ಮರಕ್ಷಣೆಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸುರಕ್ಷತೆಯ ವಾತಾವರಣ ನಿರ್ಮಿಸಬೇಕಾಗಿದೆ. ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ನೋಡಿದರೆ ನಾರಿಶಕ್ತಿಯಂತಹ ಆತ್ಮರಕ್ಷಣೆ ನೀಡುವ ಕಾರ್ಯಕ್ರಮಗಳು ತುಂಬಾ ಅವಶ್ಯಕವಾಗಿವೆ ಎಂದು ಅವರು ತಿಳಿಸಿದರು.

ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರಿಗೆ ಸುರಕ್ಷತೆಯ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗುತ್ತದೆ. ಹಾಸ್ಟೆಲ್‌ನಲ್ಲಿ ಓದುವ ಹೆಣ್ಣು ಮಕ್ಕಳ ಪಾಲಕರು ಕರೆ ಮಾಡಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಬೇರುಗಳು ಗಟ್ಟಿಯಾಗಿದ್ದರೆ ಯಾವುದೇ ಬಿರುಗಾಳಿಗೂ ಮರ, ಗಿಡ ಅಲುಗಾಡುವುದಿಲ್ಲ. ಹಾಗೆಯೇ ಹೆಣ್ಣು ಮಕ್ಕಳು ಮನೆ, ಶಾಲೆಯಲ್ಲಿ ಕಲಿತ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತವಾದ ಸಾಧನೆ ಮಾಡಬೇಕು ಎಂದು ಹೇಳಿದರು.

ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಕರಾಟೆ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದರ ಜೊತೆಗೆ ಆತ್ಮ ರಕ್ಷಣೆಗೂ ಸಹಕಾರಿ.

ಸಾರ್ವಜನಿಕ ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಎದುರಿಸಲು ಸಹಕಾರಿಯಾಗುತ್ತದೆ. ದಾವಣಗೆರೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸುರಕ್ಷಾ ಆ್ಯಪ್‌ ಆರಂಭಿಸುವ ಜೊತೆಗೆ ದುರ್ಗಾ ಪಡೆಯನ್ನು ಮತ್ತಷ್ಟು ಕಾರ್ಯ ಪ್ರವೃತ್ತಗೊಳಿಸಲಾಗಿದೆ. ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸಹಾಯಕ್ಕೆ ಇಲಾಖೆ ಬರಲಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಕೌಶಲ್ಯ ಹೊಂದಬೇಕೆಂಬ ಸದುದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ 11,229 ಬಾಲಕಿಯರಿಗೆ, ಹಾಸ್ಟೆಲ್‌ಗಳ 3 ಸಾವಿರ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕರಾಟೆ ಜೊತೆ ಜೂಡೋ, ಮಾರ್ಷಲ್ ಆರ್ಟ್ಸ್‌, ಇತರೆ ಆತ್ಮರಕ್ಷಣೆ ಕಲೆಗಳ ತರಬೇತಿಗೆ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿನಿಯರು, ಹೆಣ್ಣು ಮಕ್ಕಳು ಇಂತಹ ಆತ್ಮರಕ್ಷಣಾ ಕಲೆಗಳನ್ನು ನಿರಂತರ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್‌ಪಿ ಉಮಾ ಪ್ರಶಾಂತ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ, ಬಿಸಿಎಂ ಅಧಿಕಾರಿ ಗಾಯತ್ರಿ, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಬಿಇಒ ಪುಷ್ಪಲತಾ, ಕರಾಟೆ ತರಬೇತುದಾರ ಕುಬೇರನಾಯ್ಕ ಸೇರಿ ಇತರರು ಇದ್ದರು.

ನಗರದ ವಿವಿಧ ಇಲಾಖೆಯಡಿ ವ್ಯಾಸಂಗ ಮಾಡುತ್ತಿರುವ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ರಕ್ಷಣಾ ಕೌಶಲ್ಯಗಳ ತರಬೇತಿ ನೀಡುತ್ತಿರುವ 10 ಜನ ತರಬೇತುದಾರರಿಗೆ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

-----

ಹೆಣ್ಣು ಮಕ್ಕಳ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ಧ: ಎಸ್‌ಪಿ ಉಮಾ ಅಭಯ

ದಾವಣಗೆರೆ: ಜಿಲ್ಲೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಜೊತೆಗೂಡಿ ಹೆಣ್ಣು ಮಕ್ಕಳಿಗಾಗಿ ಸುರಕ್ಷಾ ಆ್ಯಪ್‌ ತಯಾರಿಸಿದ್ದು, ಇದುವರೆಗೆ ಅದಕ್ಕೆ ಬಂದ 150ಕ್ಕೂ ಹೆಚ್ಚು ಕರೆಗಳಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸ್ಪಂದಿಸಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಗುರುವಾರ ನಡೆದ ನಾರಿ ಶಕ್ತಿ ಹಾಗೂ ಸುರಕ್ಷಾ ಆ್ಯಪ್‌ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ಹೆಣ್ಣು ಮಕ್ಕಳು ಸುರಕ್ಷಾ ಆ್ಯಪ್ ಅಥವಾ 112ಗೆ ಕರೆ ಮಾಡುವ ಮೂಲಕ ಪೊಲೀಸರನ್ನು ಸಂಪರ್ಕಿಸಿ, ತಕ್ಷಣದ ಸಹಾಯ, ರಕ್ಷಣೆಯನ್ನು ಪಡೆಯಬಹುದು ಎಂದು ತಿಳಿಸಿದರು.

ಹೆಣ್ಣು ಮಕ್ಕಳು ಶಾಲಾ-ಕಾಲೇಜುಗಳಿಗೆ ಬರುವುದು ಕೇವಲ ಶಿಕ್ಷಣ ಪಡೆಯುವುದಕ್ಕಷ್ಟೇ ಅಲ್ಲ, ತಮ್ಮನ್ನು ತಾವು ಕಾಪಾಡಿಕೊಳ್ಳುವ ಜೊತೆಗೆ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಆಗ ಮಾತ್ರ ನಿಮಗೆ ಹಾಗೂ ನೀವು ಪಡೆದ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದು ಹೇಳಿದರು.

Share this article