ಉಡುಪಿ ಕೃಷ್ಣಮಠದಲ್ಲಿ ಗೀತಾ-ಯೋಗ ಸಂಗಮ!

KannadaprabhaNewsNetwork | Updated : Oct 25 2024, 01:01 AM IST

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಯೋಗಗುರು ರಾಮ್‌ದೇವ್ ಅವರಿಂದ 3 ದಿನಗಳ ಯೋಗ ತರಗತಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಭಗವದ್ಗೀತೆಯಲ್ಲಿ‌ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮ್‌ದೇವ್‌ ಜೀ ಅವರು ವಿಶ್ವವ್ಯಾಪಕ ಗೊಳಿಸಿ, ಜನರನ್ನು ಧರ್ಮಮಾರ್ಗದಲ್ಲಿ ಕರ್ತವ್ಯ ಭ್ರಷ್ಟರಾಗದಂತೆ ಜಾಗೃತಗೊಳಿಸುತ್ತಿದ್ದಾರೆ ಎಂದು ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.‌ಅವರು ಗುರುವಾರ ಪ್ರಾತಃಕಾಲ ಕೃಷ್ಣಮಠದ ರಾಜಾಂಗಣದಲ್ಲಿ ಯೋಗಗುರು ರಾಮ್‌ದೇವ್ ಅವರಿಂದ 3 ದಿನಗಳ ಯೋಗ ತರಗತಿಯನ್ನು ಉದ್ಘಾಟಿಸಿ, ತಾವೂ ಬಾಬಾ ಅವರೊಂದಿಗೆ ಯೋಗ ಮಾಡಿ ಆಶೀರ್ವಚನ ನೀಡಿದರು.ಗೀತೆಯನ್ನು ಬಿಟ್ಟು ಯೋಗ ಇಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡಕ್ಕೂ ಶ್ರೀ ಕೃಷ್ಣನು ಗೀತೆಯಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಿದ್ದಾನೆ.‌ ಅದರಂತೆ ನಾವು ಗೀತೆಯ ತತ್ವಗಳನ್ನು ಜಗತ್ತಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದರೆ, ಬಾಬಾ ಅವರು ಯೋಗದ ಮಹತ್ವವನ್ನು ವಿಶ್ವವ್ಯಾಪಕಗೊಳಿಸುತ್ತಿದ್ದಾರೆ. ಆ ನೆಲೆಯಲ್ಲಿ ಈ ಕಾರ್ಯಕ್ರಮ ಗೀತಾ ಯೋಗ ಸಂಗಮ ಎಂದು ಬಣ್ಣಿಸಿದರು.* ನಿತ್ಯ 5 ಕೋಟಿ ಜನರಿಂದ ಯೋಗ

ಈ ಸಂದರ್ಭ ಬಾಬಾ ರಾಮ್ ದೇವ್ ಅವರು ಮಾತನಾಡಿ, ಪತಂಜಲಿ ಯೋಗ ಪೀಠದ ಮೂಲಕ ನಿತ್ಯ ದೇಶ ಮತ್ತು ಹೊರದೇಶಗಳಲ್ಲಿ 5 ಕೋಟಿ ಜನ ಯೋಗಾಭ್ಯಾಸ ಪ್ರಾಣಾಯಾಮಗಳನ್ನು ನಡೆಸುತ್ತಿದ್ದಾರೆ.‌ ಆಧುನಿಕ ಜಗತ್ತಿನಲ್ಲಿ ಮನುಷ್ಯನ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಭಾರತೀಯ ಯೋಗ ಒಂದೇ ಪರಿಹಾರ ಎಂದು ಇಡೀ ಜಗತ್ತಿಗೆ ಅರ್ಥವಾಗುತ್ತಿದೆ ಎಂದರು.ಜಗದ್ಗುರು ಮಧ್ವಾಚಾರ್ಯರಂಥ ನಮ್ಮ ಪೂರ್ವಸೂರಿಗಳು ತಮ್ಮ ಜೀವನದಲ್ಲಿ ಯೋಗಸೂತ್ರಗಳನ್ನು ಅಳವಡಿಸಿಕೊಂಡೇ ಮಹಾಪುರುಷರಾದರು ಎಂದ ರಾಮ್‌ದೇವ್, ಪುತ್ತಿಗೆ ಶ್ರೀಗಳು ಹಮ್ಮಿಕೊಂಡ ಗೀತಾಭಿಯಾಮವನ್ನು ಪ್ರಶಂಸಿಸಿ, ಪ್ರಸ್ತುತ ಅವರ ಸನ್ಯಾಸ ಜೀವನಕ್ಕೂ ಹಾಗೂ ತಮ್ಮ ಯೋಗಪ್ರಸಾರ ಜೀವನಕ್ಕೂ ಸುವರ್ಣ ಮಹೋತ್ಸವ ವರ್ಷಗಳಾಗುತ್ತಿರುವುದು ಕಾಕತಾಳೀಯ ಎಂದು ಸಂತಸಪಟ್ಟರು.ಪೀಠದ ಯೋಗಾಧಿಕಾರಿ ಸ್ವಾಮೀ ಪರಮಾರ್ಥ ಜೀ, ರಾಜ್ಯ ಪ್ರಭಾರಿ ಭವರ್ ಲಾಲ್ ಆರ್ಯ, ಮಠದ ದಿವಾನರಾದ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಜಿಲ್ಲಾ ಕೇಂದ್ರದ ವೇಂಕಟೇಶ ಮೆಹಂದಳೆ, ರಾಘವೇಂದ್ರ ಭಟ್ ಮೊದಲಾದವರಿದ್ದರು.

Share this article