ಹಾವೇರಿ: ಅಲೆಮಾರಿ ಸಮುದಾಯದ 59 ಜಾತಿಗಳಿಗೆ ಶೇ. 1ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿರುವ ಚಿನ್ನದಾಸ, ಬುಡಜಂಗಮ, ಸುಡುಗಾಡುಸಿದ್ದ, ದಕ್ಕಲರು, ಮಾಲದಾಸರು, ಹೊಲಿಯ ದಾಸರು, ಡಂಬರ್ ಸೇರಿದಂತೆ ಹಿಂದುಳಿದ 59 ಅಲೆಮಾರಿ ಸಣ್ಣ ಜಾತಿಗಳನ್ನು ಅತಿ ಕಡಿಮೆ ಹಿಂದುಳಿದಿರುವ “ಸಿ” ವರ್ಗದ ಸ್ಪಷ್ಟ ಜಾತಿಗಳೊಟ್ಟಿಗೆ ಸೇರಿಸಿರುವುದು ಸುಪ್ರೀಂ ಕೋರ್ಟಿನ ನಿರ್ದೇಶನದ ಉಲ್ಲಂಘನೆ ಹಾಗೂ ಅಪಮಾನಿಸಿದಂತಾಗಿದೆ. ಅಲ್ಲದೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಮೂರು ಜಾತಿಗಳ ಗೊಂದಲವನ್ನು ಕೂಡಲೇ ನಿವಾರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಕೆ ವೇಳೆ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ವಿಭೂತಿ ಶೆಟ್ಟಿ, ಮುಖಂಡರಾದ ಜಗದೀಶ ಹರಿಜನ, ನವೀನ ಶಿದ್ದಣ್ಣನವರ, ಕೃಷ್ಣಾ ಶಿಕಸಾಲ, ಈರಪ್ಪ ಮೂಡಿ ಅನೇಕರಿದ್ದರು.