ಗದಗ: ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ವೀರಾಪುರ ಓಣಿಯ ಅಂಜಲಿ ಹತ್ಯೆಯು ಇಡೀ ರಾಜ್ಯದ ಜನತೆಯನ್ನ ಬೆಚ್ಚಿ ಬೀಳಿಸಿದೆ. ಅಮಾನುಷ, ನಿರ್ಭಯವಾಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ ಮೃತ ಯುವತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ₹25 ಲಕ್ಷ ಪರಿಹಾರ ನೀಡಲು ಒತ್ತಾಯಿಸಿ ಜಿಲ್ಲಾ ದಲಿತ ಮಿತ್ರ ಮೇಳ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾನೂನು ಬಗ್ಗೆ ಅಪರಾಧಿಗಳಿಗೆ ಭಯವಿಲ್ಲವಾಗಿದೆ. ಮಹಿಳೆಯರ ಮೇಲಿನ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತೀವ್ರ ನಿಗಾ ವಹಿಸಿ ಇಂತಹ ಪ್ರಕರಣಗಳನ್ನು ತಡೆಯಬೇಕು ಹಾಗೂ ಕಾಲೇಜು ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವಂತಹ ಶೋಷಣೆ, ಹಲ್ಲೆಗಳ ಬಗ್ಗೆ ಪೊಲೀಸರು ಗಮನಹರಿಸುವಂತೆ ತಾವುಗಳ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.