ಕನ್ನಡಪ್ರಭ ವಾರ್ತೆ ತುಮಕೂರುತ್ರಿವಿಧ ದಾಸೋಹಮೂರ್ತಿ ಲಿಂಗೈಕ್ಯ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತ ರತ್ನ " ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದರು.ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಪ್ರಯುಕ್ತ ಸೋಮವಾರ ಬೆಳಗ್ಗೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಮಾಡಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದರು.
ಶ್ರೀಗಳಿಗೆ ಭಾರತ ರತ್ನ ಬೇಕಿಲ್ಲ, ಆದರೆ ಅವರ ಕೊಡುಗೆಗೆ ಭಾರತ ರತ್ನ ಕೊಡಬೇಕಾದುದು ಗೌರವ. ಈಗಾಗಲೇ ರಾಜ್ಯ ಸರ್ಕಾರವು ಶಿಫಾರಸ್ಸು ಮಾಡಿರುವುದನ್ನು ಪರಿಗಣಿಸಿದರೆ ಸಾಕು. ಸ್ವಾಮೀಜಿಯವರಿಗೆ ಭಾರತ ರತ್ನ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿದರೆ ಯಾವ ಅರ್ಜಿಯು ಬೇಕಾಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇಡೀ ದೇಶದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರ ಕೊಡುಗೆ ಒಂದು ರೀತಿಯ ವಿಸ್ಮಯ. ಎಷ್ಟೊಂದು ಬಡ ಮಕ್ಕಳಿಗೆ ಅನ್ನ ದಾಸೋಹ, ವಿದ್ಯಾದಾನ ಮಾಡುವ ದೊಡ್ಡ ಪ್ರಯತ್ನ ದೇಶದಲ್ಲಿ ಎಲ್ಲೂ ಇಲ್ಲ ಎಂದು ಹೇಳಿದರು.ಈ ದೇಶದಲ್ಲಿ ಸಾಮಾನ್ಯ ಜನರು ಪ್ರಜ್ಞಾವಂತರಾಗಬೇಕು. ಆಗ ಅಭಿವೃದ್ಧಿ ಸುಲಭವಾಗುತ್ತದೆ ಎಂಬ ಮಹಾತ್ಮ ಗಾಂಧೀಜಿ ಮಾತನ್ನು ಶಿವಕು ಮಾರ ಸ್ವಾಮೀಜಿಯವರು ಆಗಾಗ್ಗೆ ಹೇಳುತ್ತಿದ್ದರು. ಹೀಗಾಗಿ, ಮಕ್ಕಳಿಗೆ ಶಿಕ್ಷಣ ಕೊಡುವುದು ಅತಿ ಮುಖ್ಯ ಎಂಬುದು ಶ್ರೀಗಳಿಗೆ ತಿಳಿದಿತ್ತು. ಇಡೀ ರಾಜ್ಯದಲ್ಲಿ ಎಲ್ಲ ಭಾಗದಿಂದ ಬಂದ ಬಡ ಮಕ್ಕಳು ವಿದ್ಯೆ ಕಲಿತು, ಜೀವನವನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.ಮಠದಲ್ಲಿ ಕಲಿತ ಅನೇಕ ಜನ ವಿದೇಶದಲ್ಲಿದ್ದಾರೆ. ರಾಜ್ಯ ಮತ್ತು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಡೀ ದೇಶದಲ್ಲಿ ಇದೊಂದು ಬಹಳ ದೊಡ್ಡ ಕೊಡುಗೆ ಎಂದು ಅವರು ಬಣ್ಣಿಸಿದರು.