ಮಕ್ಕಳಿಗೆ ಮೊಬೈಲ್‌ ನೀಡದೆ ಪುಸ್ತಕ ಕೊಡಿ

KannadaprabhaNewsNetwork | Published : Dec 31, 2024 1:01 AM

ಸಾರಾಂಶ

ಬಾಲ್ಯದಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಾದ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ. ಅದರಲ್ಲೂ ಇತ್ತೀಚಿಗೆ ಹೆಚ್ಚಾಗಿ ಮಕ್ಕಳು ಮೊಬೈಲ್ ಗಳ ದಾಸರಾಗುತ್ತಿದ್ದಾರೆ. ಕೆಲವೊಂದು ಕಡೆ ಪೋಷಕರೇ ಮಕ್ಕಳಿಗೆ ಮೊಬೈಲ್ ಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಇಂದಿನ ಕಾಲದಲ್ಲಿ ಮೊಬೈಲ್, ಇಂಟರ್ ನೆಟ್ ಮೂಲಕ ಬಹಳಷ್ಟು ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಟ್ಟು, ಪುಸ್ತಕಗಳನ್ನು ಓದಲು ನೀಡಬೇಕು ಎಂದು ಚಿಕ್ಕಬಳ್ಳಾಪುರದ ಕಳವಾರ ಓಂಕಾರ ಜ್ಯೋತಿ ಆಶ್ರಮದ ಉಮಾಮಹೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ವರ್ಲಕೊಂಡ ಗ್ರಾಮದ ಎನ್.ಎಸ್.ಕಲ್ಯಾಣ ಮಂಟಪದಲ್ಲಿ ಜನಕಲ್ಯಾಣ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಿಯಾದ ಮಾರ್ಗ ತೋರಿಸಿ

ಬಾಲ್ಯದಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಾದ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ. ಅದರಲ್ಲೂ ಇತ್ತೀಚಿಗೆ ಹೆಚ್ಚಾಗಿ ಮಕ್ಕಳು ಮೊಬೈಲ್ ಗಳ ದಾಸರಾಗುತ್ತಿದ್ದಾರೆ. ಕೆಲವೊಂದು ಕಡೆ ಪೋಷಕರೇ ಮಕ್ಕಳಿಗೆ ಮೊಬೈಲ್ ಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಹಾಳಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಿದರು.

ಬಳಿಕ ಆರ್.ಆರ್.ಎಸ್ ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕರಾದ ಗುರುಪ್ರಸಾದ್ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಲಕಸಬುಗಳು ಅವನತಿಯತ್ತ ಸಾಗುತ್ತಿವೆ. ಜನರು ಗ್ರಾಮೀಣ ಭಾಗಗಳನ್ನು ತೊರೆದು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಭೂ ಸಂಪತ್ತು, ಗೋ ಸಂಪತ್ತು, ನೇಸರ ಸಂಪತ್ತು, ಜನ ಸಂಪತ್ತು, ಪರಿಸರ ಸಂರಕ್ಷಣೆ ಎಲ್ಲವೂ ಮರೆಯಾಗುತ್ತಿವೆ ಎಂದು ವಿಷಾದಿಸಿದರು.

ಈ ವೇಳೆ ಜನಕಲ್ಯಾಣ ಟ್ರಸ್ಟ್ ನ ಅಧ್ಯಕ್ಷ ಎನ್.ಎಸ್.ನಾಗೇಂದ್ರ ಪ್ರಸಾದ್, ಗ್ರಾಮ ವಿಕಾಸ ಯೋಜನೆಯ ಶ್ರೀಧರ್ ಸಾಗರ್ ಜೀ, ಯೂತ್ ಫಾರ್ ಸೇವಾ ಸಂಸ್ಥೆಯ ಸಂಸ್ಥಾಪಕರಾದ ವೆಂಕಟೇಶ್ ಮೂರ್ತಿ, ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಎಂ.ಎಸ್.ವೆಂಕಟೇಶ್, ಆರ್.ಎಸ್.ಎಸ್ ಮಹಾನಗರ ಸಂಚಾಲಕ ಮಿಲಿಂದ ಗೋಖಲೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಡಾ.ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

Share this article