ಕನ್ನಡಪ್ರಭ ವಾರ್ತೆ ಹುಣಸಗಿ
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ಮಾತೆಯರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಬಸವಲಿಂಗ ಶಿವಯೋಗಿಗಳ ವಿರಕ್ತಮಠ ಬಲಶೆಟ್ಟಿಹಾಳ ಶ್ರೀಮಠದ ಧರ್ಮದರ್ಶಿಗಳಾದ ವಿದ್ವಾನ್ ಸಿದ್ದಲಿಂಗಯ್ಯ ಶಾಸ್ತ್ರಿ ಹೇಳಿದರು.ಪಟ್ಟಣದ ಯುಕೆಪಿ ಕ್ಯಾಂಪಿನ ಸ್ಪಂದನ ಪಬ್ಲಿಕ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಪಾಲಕರು ಜೊತೆಗೂಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ವಚನ ಸಾಹಿತ್ಯಗಳ ಪರಿಚಯ, ಗುರು-ಹಿರಿಯರನ್ನು ಗೌರವಿಸುವ ಭಾವನೆ ಕಲಿಸಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗುಳಬಾಳದ ರಾಮಲಿಂಗೇಶ್ವರ ಆನಂದಾಶ್ರಮದ ಪೂಜ್ಯರಾದ ಮರಿಹುಚ್ಚೇಶ್ವರ ಮಹಾಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಒಳ್ಳೆಯ ಸಂಸ್ಕಾರ ನೀಡಿದರೆ, ತಂದೆ-ತಾಯಿಯರನ್ನು ಅನಾಥಾಶ್ರಮಕ್ಕೆ ಕಳುಹಿಸುವ ಅವಶ್ಯಕತೆ ಬರುವುದಿಲ್ಲ ಎಂದರು.ಸ್ಪಂದನ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ, ದೇಶಾಭಿಮಾನ, ನಮ್ಮ ನಾಡು-ನುಡಿ ಹಾಗೂ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಸ್ಥೆ ಮುಖ್ಯಸ್ಥ ಮಲ್ಲಿಕಾರ್ಜುನ ಗುತ್ತೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಿಗೆಣ್ಣ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿ ಬಂಗಾರಪ್ಪ ಜಿ., ರಾಘವೇಂದ್ರ ಜಹಾಗೀರದಾರ, ಬಸಯ್ಯ ಗುತ್ತೇದಾರ, ಸತೀಶ ರಾಠೋಡ, ಸೂರ್ಯನಾರಾಯಣ ರೆಡ್ಡಿ ಅಮರಯ್ಯಸ್ವಾಮಿ ಜಾಲಿಬೆಂಚಿ ವೇದಿಕೆಯಲ್ಲಿದ್ದರು. ನಂತರ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಉಪನ್ಯಾಸಕ ಆರ್. ಎಲ್. ಸುಣಗಾರ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುಂಡು ರಾಠೋಡ ಅವರಿಗೆ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಪ್ರಮೀಳಾ ಹಾಗೂ ಜಯಶ್ರೀ ನಿರೂಪಿಸಿ, ಭಾಗ್ಯಶ್ರೀ ಸ್ವಾಗತಿಸಿ, ಪೂಜಾ ನಗನೂರ ವಂದಿಸಿದರು.