ನರಗುಂದ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಮೌಲ್ಯ, ಸಂಸ್ಕಾರ ರೂಢಿಸಬೇಕು. ಶಿಕ್ಷಕರಾದವರು ಮೌಲ್ಯಾಧಾರಿತ ಶಿಕ್ಷಣ ನೀಡುವಂತೆ ಲಯನ್ಸ್ ಕ್ಲಬ್ ಜಿಲ್ಲಾ 317ಬಿ ಗವರ್ನರ್ ಮನೋಜ್ ಮಾಣಿಕ ಹೇಳಿದರು.
ಅವರು ಪಟ್ಟಣದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಲಯನ್ಸ್ ಕ್ವೆಸ್ಟ್ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕುಟುಂಬ ಆಧಾರಿತ, ಸಂಸ್ಕಾರ ಆಧಾರಿತ ಶಿಕ್ಷಣ ನೀಡಬೇಕಿದೆ. ಈ ಕಾರ್ಯಾಗಾರದ ಮುಖ್ಯ ಉದ್ದೇಶ 6ರಿಂದ 8ನೇ ತರಗತಿಯ 11 ರಿಂದ 14 ವರ್ಷದ ಮಕ್ಕಳನ್ನು ಆದರ್ಶ ವಿದ್ಯಾರ್ಥಿಗಳನ್ನಾಗಿ ರೂಪಿಸಬೇಕಿದೆ. ಅವರಲ್ಲಿರುವ ಋಣಾತ್ಮಕ ನಡವಳಿಕೆ ಹೋಗಲಾಡಿಸಲು ವಿವಿಧ ಶೈಕ್ಷಣಿಕ ತಂತ್ರ ಬಳಸಬೇಕು. ಲಯನ್ಸ್ ಅಂತಾರಾಷ್ಟ್ರೀಯ ಕ್ಲಬ್ ಮೂಲಕ ಲಯನ್ಸ್ ಕ್ವೆಸ್ಟ ಕಾರ್ಯಕ್ರಮ ರೂಪಿಸಿ ವಿಶ್ವದಾದ್ಯಂತ ಶಿಕ್ಷಕರಿಗೆ ಈ ತರಬೇತಿ ನೀಡಲಾಗುತ್ತಿದೆ ಎಂದರು.ಈ ಮೂಲಕ ಮಕ್ಕಳು ತೊಡಗುವ ನಕಾರಾತ್ಮಕ ಚಟುವಟಿಕೆ, ವ್ಯಸನಗಳಿಗೆ ಒಳಗಾಗುವುದನ್ನು ತಡೆಯಲು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇದರ ಮೂಲಕ ತರಬೇತಿ ಪಡೆದ ಶಿಕ್ಷಕರು ವರ್ಗದಲ್ಲಿ ಅಳವಡಿಸಿಕೊಂಡು ಮಕ್ಕಳ ಮನಸ್ಸು,ನಡವಳಿಕೆ ಬದಲಿಸಬೇಕಿದೆ. ಇದರಿಂದ ಮುಂದಿನ ಹಂತಕ್ಕೆ ಬಂದಾಗ ಮಕ್ಕಳು ದುಶ್ಚಟಗಳಿಗೆ ಒಳಗಾಗುವುದನ್ನು ತಡೆಯಲು ಸಾಧ್ಯವಿದೆ. ಆದ್ದರಿಂದ ತರಬೇತಿ ಪಡೆಯುವ ಶಿಕ್ಷಕರು ಇದನ್ನು ಕಾರ್ಯರೂಪಕ್ಕೆ ತರಬೇಕು. ಇದೇ ತರಬೇತಿ ನೆರೆಹೊರೆಯ ಶಿಕ್ಷಕರಿಗೆನೀಡುವ ಮೂಲಕ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಇಂದಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಸಿಗುತ್ತಿಲ್ಲ. ಅದಕ್ಕೆ ಒತ್ತು ನೀಡುವ ಸಲುವಾಗಿ ಮಕ್ಕಳಿಗೆ ಶೈಕ್ಷಣಿಕ ಮೌಲ್ಯ ಬೆಳೆಸುವ ದೃಷ್ಟಿಯಲ್ಲಿ ಈ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. 50 ವರ್ಷಗಳಿಂದ ಲಯನ್ಸ್ ಕ್ವೆಸ್ಟ್ 6 ರಿಂದ 8 ನೇ ತರಗತಿಯ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಈ ವಯೋಮಾನದ ಮಕ್ಕಳಿಗೆ ಶಿಕ್ಷಕರಾದವರು ಕಾಳಜಿ ಪೂರ್ವಕವಾಗಿ ಉತ್ತಮ ಚಿಂತನೆ,ನಡವಳಿಕೆ ರೂಪಿಸಬೇಕು ಎಂದು ಹೇಳಿದರು.
ಶಿಕ್ಷಕರು ತಮ್ಮ ವೃತಿ ಧರ್ಮ ಪಾಲಿಸಬೇಕಿದೆ. ಪುನರ ತರಬೇತಿ ಹೊಂದಿ ಮಕ್ಕಳಲ್ಲಿ ಉತ್ತಮ ಚಿಂತನೆ ರೂಢಿಸುವಲ್ಲಿ ಶಿಕ್ಷಕರು ತರಬೇತಿ ಹೊಂದಬೇಕು. ತರಬೇತಿ ಪಡೆದ ನಂತರ ಮಕ್ಕಳಿಗೆ ಅದನ್ನು ಬೋಧಿಸಿ ಅವರ ಪರಿವರ್ತನೆಗೆ ಕಾರಣರಾಗಬೇಕು. ನಮ್ಮ ಕ್ಲಬ್ ಮೂಲಕ ನಮ್ಮ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳು, ರೋರ‍್ಯಾಕ್ಟ್, ನವೋದಯ ಶಾಲೆಗಳ ಶಿಕ್ಷಕರು ಈ ತರಬೇತಿಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಶಾಲೆಗಳನ್ನು ಕೂಡಿಸಿಕೊಂಡು ಎಲ್ಲ ಶಿಕ್ಷಕರಿಗೆ ತರಬೇತಿ ಕೊಡಿಸುವ ಉದ್ದೇಶ ಹೊಂದಲಾಗಿದೆ. ಒಟ್ಟಾರೆ 6 ರಿಂದ 8ನೇ ತರಗತಿಯ ಮಕ್ಕಳಿಗೆ ಮೌಲ್ಯಾಧಾರಿತ, ಉತ್ತಮ ನಡವಳಿಕೆ ರೂಪಿಸುವ ಶಿಕ್ಷಣ ನೀಡುವಲ್ಲಿ ಶಿಕ್ಷಕ ಬಳಗ ಮುಂದಾಗುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ವಿನೋದ ಜೈನ್, ಜಿಲ್ಲಾ ಲಯನ್ಸ್ ಕ್ಲಬ್‌ನ ಎಂ.ಸಿ. ಮಳಿಮಠ, ಎಸ್.ಕೆ. ಮುದುಗಲ್, ಡಾ. ಕೋಟಿ , ಎಸ್.ಎಚ್. ಕಬ್ಬಿನಕಂತಿಮಠ, ಲಯನ್ಸ್ ಕ್ಲಬ್ ಖಜಾಂಚಿ ಎಸ್.ಎಸ್. ಪಾಟೀಲ, ಲಯನ್ಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಲಯನ್ಸ್ ಕ್ಲಬ್‌ನ ಸದಸ್ಯರು, ವೆಂಕಟೇಶ ಗುಡಿಸಾಗರ ಸೇರಿದಂತೆ ಮುಂತಾದವರು ಇದ್ದರು.
ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಸ್ವಾಗತಿಸಿದರು, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಡಾ. ವೈ.ಪಿ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಜೆ.ವಿ. ಕಂಠಿ ವಂದಿಸಿದರು.