ಮೈಸೂರು/ಚಾಮರಾಜನಗರ : ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಶುದ್ಧ ನೀರು ಸಿಗುವಂತೆ ಮಾಡುವುದೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗುರಿ. ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರಸ್ವಾಮಿ ಅವರು, ಭವಿಷ್ಯ ಉಳಿಯಬೇಕು ಎಂದರೆ ಪರಿಸರ ಉಳಿಯಬೇಕು. ಎಲ್ಲರಿಗೂ ಪರಿಶುದ್ಧವಾದ ಗಾಳಿ ಮತ್ತು ನೀರು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲಸ ಮಾಡುತ್ತಿದೆ ಎಂದರು.
ಕೊರೋನಾ ಬಂದಾಗ ಜನ ಆಮ್ಲಜನಕ ಇಲ್ಲದೆ ಸತ್ತರು. ಇದರಿಂದ ನಾವು ಪಾಠ ಕಲಿತು ಆಮ್ಲಜನಕವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಭೂಮಿ ಮತ್ತು ಅಂತರ್ಜಲವನ್ನು ಸೇರುತ್ತಿರುವ ರಾಸಾಯನಿಕ ವಸ್ತುಗಳ ಬಗ್ಗೆ ತಿಳಿದುಕೊಳ್ಳಬೇಕು. ಆಹಾರ ಇಲ್ಲದಿದ್ದರೂ ಬದುಕಬಹುದು, ಗಾಳಿ ಮತ್ತು ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ವಿವರಿಸಿದರು.
ಕಾರ್ಖಾನೆಗಳು ಬೇಕು, ಉದ್ಯೋಗ, ಉದ್ಯಮ ಬೇಕು. ಆದರೆ ಕಾರ್ಖಾನೆಗಳ ಹೊರಸೂಸುವ ಬಗ್ಗೆ ಎಚ್ಚರದಿಂದ ಇರಬೇಕು. ಹಾಗೆಯೇ ನಮ್ಮ ಸಮಾಜವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪಣತೊಡಬೇಕು ಎಂದು ಕರೆಕೊಟ್ಟರು.
ಮಡಿಕೇರಿಯಿಂದ ಚಾಮರಾಜನಗರದ ವರೆಗಿನ ಕಾವೇರಿ ನದಿಗೆ ಒಳಚರಂಡಿ ನೀರು, ಘನತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರಿ ನೀರು ಕಲುಷಿತವಾಗುತ್ತಿರುವುದು ವಿಷಾದಕರ ಸಂಗತಿ. ಕಾವೇರಿ ಕಲುಷಿತ ಆಗುವುದನ್ನು ತಡೆಯಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಕಾವೇರಿ ನೀರು ಕಲುಷಿತಗೊಳ್ಳುವುದನ್ನು ತಡೆಯಲು ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ಸಮಿತಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ. ಪ್ರತಿ ತಿಂಗಳು ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕಾವೇರಿ ನದಿ ಮತ್ತು ಇದರ ಉಪ ನದಿಗಳ ನೀರಿನ ಗುಣಮಟ್ಟವನ್ನು 47 ಸ್ಥಳಗಳಲ್ಲಿ ಮಾಪನ ಮಾಡಿ ನೀರಿನ ಗುಣಮಟ್ಟವನ್ನು ಪ್ರಾದೇಶಿಕ ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಗೃಹ ತ್ಯಾಜ್ಯವು ಚರಂಡಿ ಮೂಲಕ ನದಿಗೆ ಸೇರದಂತೆ ನಿಗಾವಹಿಸಿ, ಒಳಚರಂಡಿ ಮತ್ತು ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಗೆ ಕ್ರಮವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯದ 15 ಕಡೆ ಸುವರ್ಣ ಮಹೋತ್ಸವದ ಬೃಹತ್ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆಯಾದರೂ ರಾಜ್ಯದ ಎಲ್ಲಾ ಜಿಲ್ಲೆಗಳನ್ನೂ ಒಳಗೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರ ಮಟ್ಟದಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹತ್ತು-ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶಗಳಿಂದ ಹಿಡಿದು, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದವರೆಗೆ ಏಕ ಕಾಲಕ್ಕೆ ದೊಡ್ಡ ಪ್ರಮಾಣದಲ್ಲಿ ಪರಿಸರ ಜಾಗೃತಿ ಮೂಡಿಸುವ ಹಾಗೂ ಮಾಲಿನ್ಯ ನಿಯಂತ್ರಣ ಮಾಡಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಅವರಿಗೆ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರವಾರು ನಡೆಯುತ್ತಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ₹3 ಸಾವಿರ ಬಹುಮಾನ ನೀಡಲಾಗುವುದು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪರಿಗಣಿಸಿ ‘ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರಿಲ್ಸ್‌ಗೆ ₹50000 ಪ್ರಥಮ ಬಹುಮಾನ, ₹25000 ದ್ವಿತೀಯ ಬಹುಮಾನ ಹಾಗೂ ₹10000 ತೃತೀಯ ಬಹುಮಾನ ನೀಡಲಾಗುವುದು ಎಂದರು.
ಸಿಎಂ ಪುತ್ರನ ‘ಸಿದ್ಧಾಂತ’ ಮಾತು ಸಮರ್ಥಿಸಿದ ನರೇಂದ್ರ ಸ್ವಾಮಿ:
ಅಹಿಂದ ಚಳವಳಿಯನ್ನು ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಮುಂದುವರೆಸಲಿ ಎನ್ನುವ ಮೂಲಕ ಸಿಎಂ ಪುತ್ರ ಡಾ। ಯತೀಂದ್ರ ಮಾತನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಮರ್ಥಿಸಿಕೊಂಡರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹ ಅಹಿಂದ ಚಳವಳಿಯ ಭಾಗ. ಕಾಂಗ್ರೆಸ್ ಸಿದ್ಧಾಂತವೇ ಅಹಿಂದ ಸಿದ್ಧಾಂತ. ಸಿದ್ದರಾಮಯ್ಯನವರ ನಂತರ ಚಳವಳಿಯನ್ನು ಒಬ್ಬರು ಮುಂದುವರೆಸಬೇಕು ತಾನೇ. ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಜೊತೆ ಸುದೀರ್ಘವಾಗಿ ಇದ್ದವರು. ಅವರೇ ಚಳವಳಿ ಮುಂದುವರೆಸಲಿ ಎಂಬುದು ನಮ್ಮ ಮನವಿ. ಡಾ। ಯತೀಂದ್ರ ಅವರ ಹೇಳಿಕೆ ಅಹಿಂದ ಚಳವಳಿಗೆ ಸಂಬಂಧಪಟ್ಟಿದ್ದು. ಅದನ್ನು ಮತ್ತೊಂದು ಕೋನದಲ್ಲಿ ನೋಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ನವೆಂಬರಲ್ಲಿ ಯಾವ ಕ್ರಾಂತಿ ಆಗಲ್ಲ: ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ, ನಮ್ಮಲ್ಲಿ ಕೇವಲ ಶಾಂತಿ ಅಷ್ಟೇ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಬಿಡಬೇಕು ಎಂಬುದೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನೇನು ಸನ್ಯಾಸಿ ಅಲ್ಲ. ಪಕ್ಷ ಯಾವಾಗ ಜವಾಬ್ದಾರಿ ಕೊಡಬೇಕೋ ಆಗ ಕೊಡುತ್ತದೆ ಎಂದರು.