ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಾಗಲಿ ಈವರೆಗೂ ಶಾಂತಿಸಭೆ ನಡೆಸದೆ ಇರುವುದು ದಲಿತ ವಿರೋಧಿ ನಡೆಗೆ ಕಾರಣ
ಕನಕಗಿರಿ: ಜ. ೩೧ರಂದು ಪಟ್ಟಣದ ರುದ್ರಸ್ವಾಮಿ ಶಾಲಾ ವಾರ್ಷಿಕೋತ್ಸವ ಸಮಾರಂಭದ ವೇಳೆ ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ಸಿಪಿಐಎಂ ಕಾರ್ಯಕರ್ತರು ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಿದರು.
ನಂತರ ಸಿಪಿಐಎಂ ಮುಖಂಡ ಮಲ್ಲಪ್ಪ ಮ್ಯಾಗಡೆ ಮಾತನಾಡಿ, ಜ.೩೧ರ ರಾತ್ರಿ ಸಮಯದಲ್ಲಿ ರುದ್ರಸ್ವಾಮಿ ಶಾಲಾ ಆವರಣದಲ್ಲಿ ವಾರ್ಷಿಕೋತ್ಸವ ನಡೆಯುವ ಸಂದರ್ಭದಲ್ಲಿ ಮಾದಿಗ ಸಮಾಜಕ್ಕೆ ಸೇರಿದ ಯುವಕರು ಕಾರ್ಯಕ್ರಮ ವೀಕ್ಷಣೆಗೆಂದು ತೆರಳಿದ್ದರು. ಗಂಗಾಮತಸ್ಥ ಸಮುದಾಯ ಕೆಲ ಕಿಡಿಗೇಡಿಗಳು ದಲಿತ ಸಮುದಾಯಕ್ಕೆ ಸೇರಿದ ರಾಘು, ನಾಗಪ್ಪ ಹಾಗೂ ರತ್ನಮ್ಮ ಎನ್ನುವವರ ಮೇಲೆ ಕಾರ್ಯಕ್ರಮ ನೋಡಲು ಮಾದಿಗ ಸಮುದಾಯವರು ಬಂದಿರುತ್ತಾರೆಂದು ಆಕ್ಷೇಪ ಎತ್ತಿ ದೌರ್ಜನ್ಯ ಮಾಡಿದ್ದಾರೆ. ಈ ಪ್ರಕರಣದ ವಿಚಾರವಾಗಿ ೧೦ ಜನರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಾಗಲಿ ಈವರೆಗೂ ಶಾಂತಿಸಭೆ ನಡೆಸದೆ ಇರುವುದು ದಲಿತ ವಿರೋಧಿ ನಡೆಗೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಶಾಂತಿಸಭೆ ನಡೆಸಿ, ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ನೀಡಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಪರಸಪ್ಪ ಹುಲಿಹೈದರ, ಹುಸೇನಪ್ಪ ಕೆ, ನಬಿಸಾಬ ಚಳ್ಳಮರದ, ಸಣ್ಣ ನಿಂಗಪ್ಪ, ಹುಸೇನಸಾಬ ತಾವರಗೇರಾ, ಮೌಲಾಹುಸೇನ ಸುಳೇಕಲ್, ಲಾಲಸಾಬ್, ಹನುಮಂತ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.