ಕನ್ನಡಪ್ರಭ ವಾರ್ತೆ ಕಿಕ್ಕೇರಿ
ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾದರೆ ಸಮಾಜದಲ್ಲಿ ನೆಮ್ಮದಿ ಬದುಕು ಕಾಣಲಿದ್ದಾರೆ ಎಂದು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯ ನಾರಾಯಣ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಶ್ರೀರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್ ಹಾಗೂ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ವಿಕಲಚೇತನ ಮಕ್ಕಳ ಕ್ರೀಡಾಕೂಟ, ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಕಲಚೇತನರನನು ಅಯ್ಯೋ ಪಾಪ ಎನ್ನುವ ಜನರು ಹೆಚ್ಚಿದ್ದಾರೆ. ಇಂತಹ ಅನುಕಂಪದ ಅಲೆ ಮಾನಸಿಕವಾಗಿ ಘಾಸಿಯಾಗಲಿದೆ. ಇದನ್ನು ಬಿಟ್ಟು ಉತ್ತೇಜಿಸಿ ಇವರಿಗೆ ಬೇಕಿರುವ ಸವಲತ್ತು, ಮಾರ್ಗದರ್ಶನ ನೀಡುವ ಕೆಲಸವಾಗಬೇಕು ಎಂದರು.ಸಾಧನೆ ಸಾಧಕರ ಸ್ವತ್ತಾಗಿದೆ. ಇಂತಹ ಸಾಧನ ಮಾಡುವ ಶಕ್ತಿ ವಿಕಲಚೇತನರಲ್ಲಿದೆ. ಅವರನ್ನು ಪ್ರಾಮಾಣಿಕವಾಗಿ ಗುರ್ತಿಸಿ ಸಾಧಕರ ಪರಿಚಯವನ್ನು ಇವರಿಗೆ ತಿಳಿಸಿಕೊಟ್ಟರೆ ಬಲುದೊಡ್ಡ ಸಾಧನೆ ಮಾಡಲಿದ್ದಾರೆ. ವಿಕಲಚೇತನರಿಗೆ ಸಿಗುವ ಸೌಲಭ್ಯ ಸವಲತ್ತುಗಳನ್ನು ಅರ್ಹರಿಗೆ ಸಿಗಲು ಸಹಕರಿಸಿ ಎಂದರು.
ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಲಿಂಗರಾಜೇಗೌಡ ಮಾತನಾಡಿ, ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಸವಲತ್ತು ನೀಡಲಾಗುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಲು ಅರಿವು ಮೂಡಿಸುವ ಕೆಲಸ ಮೊದಲು ಆಗಬೇಕಿದೆ ಎಂದರು.ವಿದ್ಯಾರ್ಥಿಗಳಲ್ಲಿ ವಿಕಲಚೇತನರ ಸಾಧನೆ, ಸಹಾಯ ಮಾಡುವಂತಹ ಕೆಲಸದ ಕುರಿತು ಜಾಗೃತಿ ಮೂಡಿಸಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ವಿಕಲಚೇತನ ಮಕ್ಕಳಿಗೆ ಚಿತ್ರಕಲೆ, ವಿವಿಧ ಕ್ರೀಡಾಕೂಟ ಏರ್ಪಡಿಸಿ ವಿಜೇತರಿಗೆಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು. ಅಕಾಡೆಮಿ ತಾಲೂಕು ಸಂಯೋಜಕ ಎಚ್.ಎನ್.ಪ್ರತಾಪ್, ಸ್ವಯಂ ಸೇವಕರಾದ ಭವ್ಯ, ಜಲೇಂದ್ರ ವಸಂತ, ನಾಗರತ್ನ, ಲಕ್ಷ್ಮೀದೇವಿ, ಎಂ.ಡಿ.ಯೋಗೇಂದ್ರ, ರಾಜಶೇಖರ, ಶಿಕ್ಷಕ ಕೆ.ಎಸ್.ಮಂಜುನಾಥ್, ಸುರೇಶ್, ಎಚ್.ಎನ್. ಮಂಜೇಗೌಡ,ಭಾರತಿ, ಮುಖಂಡರಾದ ಜೇಟು ಸಿಂಗ್, ವಾಸು, ಶ್ರೀಕಾಂತ್ ಮತ್ತಿತರರು ಇದ್ದರು.