ಗದಗ: ನವ ವಿವಾಹಿತ ದಂಪತಿಗಳು ಆದರ್ಶ ಜೀವನ ಸಾಗಿಸಲಿ, ಮಕ್ಕಳಿಗೆ ಒಳ್ಳೆ ಸಂಸ್ಕಾರ ಸಂಸ್ಕೃತಿ ನೀಡಿ ಧರ್ಮದ ಹಾದಿಯಲ್ಲಿ ಮುನ್ನಡೆಸಿ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಜೀವನದಲ್ಲಿ ಸುಖ-ದುಃಖ, ಏರು-ಇಳಿತ ಬರುವದು ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಂತು ಛಲದಿಂದ ಬಾಳಿ ಸಾಧಿಸಿ ತೋರಿಸಬೇಕು ಇದನ್ನು ನವವಿವಾಹಿತರು ಅರಿತುಕೊಳ್ಳಬೇಕು. ಬಾಸಿಂಗ ಬಲ, ಕಷ್ಟ ಬಂದರೂ ತಾಳ್ಮೆ ಬೇಕು ಎಂದು ಸೂಚಿಸುವ ತಾಳಿ,ಕುಂಕುಮ, ಕಾಲುಂಗರದ ಔಚಿತ್ಯದ ಹಿನ್ನೆಲೆ ವಿಶ್ಲೇಷಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ನಾಯಕ ವಿಜಯಕುಮಾರ ಗಡ್ಡಿ ಮಾತನಾಡಿ, ಕಾಶಿ ವಿಶ್ವನಾಥ ನಗರದ ಆದರ್ಶತೆಗೆ ಹೆಸರಾಗಿದೆ. ಕಳೆದ 30 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆ ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು.ಕಾಶಿ ವಿಶ್ವನಾಥ ನಗರದ ಅಧ್ಯಕ್ಷ ದುಂಡಪ್ಪ ಆಸಂಗಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕರು ಜಾತ್ರೆ, ಸಾಮೂಹಿಕ ವಿವಾಹ, ಇತರ ಅಭಿವೃದ್ಧಿ ಕಾರ್ಯಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಒಗ್ಗಟ್ಟು ಇದ್ದರೆ ಒಳ್ಳೆಯದನ್ನು ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ನಿಂಗಪ್ಪ ಹೈದ್ರಿ ವಹಿಸಿದ್ದರು. ಶಾಂತಪ್ಪ ಅಕ್ಕಿ ನಿರೂಪಿಸಿ ವಂದಿಸಿದರು. ನಂತರ ಜರುಗಿದ ಮಹಾ ಅನ್ನಸಂತರ್ಪಣೆಗೆ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ಸಂಜೆ ಕಾಶೀ ವಿಶ್ವನಾಥನ ಮಹಾರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.