ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ೧೪೦ ಗ್ರಾಮಗಳು ಸಂಪೂರ್ಣಗಣಿ ಬಾಧಿತ ಪ್ರದೇಶ
ತುಂಗಭದ್ರಾ ನದಿ ನೀರಿನಿಂದ ತಾಲೂಕಿನಲ್ಲಿಯ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕುರಾಮಘಡ-ಕಮ್ಮತ್ತೂರು ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕುಕನ್ನಡಪ್ರಭ ವಾರ್ತೆ ಸಂಡೂರು
ಗಣಿ ಬಾಧಿತವಲ್ಲದ ಪ್ರದೇಶಗಳಲ್ಲಿ ಸಿಇಪಿಎಂಐಝೆಡ್ (ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ) ಕ್ರಿಯಾಯೋಜನೆಗಳಿಗೆ ನೀಡಲಾಗಿರುವ ಅನುಮೋದನೆ ಸ್ಥಗಿತಗೊಳಿಸಿ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಅಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಬುಧವಾರ ಜನ ಸಂಗ್ರಾಮ ಪರಿಷತ್, ರೈತ ಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ತಹಶೀಲ್ದಾರ್ ಮೂಲಕ ಕೆಎಂಇಆರ್‌ಸಿ ಮೇಲ್ವಿಚಾರಣಾ ಪ್ರಾಧಿಕಾರದ ಮುಖ್ಯಸ್ಥ ಸುದರ್ಶನರೆಡ್ಡಿಯವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ವಿಜಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ೧೪೦ ಗ್ರಾಮಗಳನ್ನು ಸಂಪೂರ್ಣವಾಗಿ ಗಣಿ ಬಾಧಿತ ಪ್ರದೇಶಗಳೆಂದು ಸುಪ್ರೀಂಕೋರ್ಟ್ ನಿರ್ದೇಶಿತ ಕೇಂದ್ರ ಉನ್ನತಾಧಿಕಾರ ಸಮಿತಿ ಪಟ್ಟಿ ಮಾಡಿದೆ. ಈ ಗಣಿ ಬಾಧಿತ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಕೆಎಂಇಆರ್‌ಸಿ (ಕರ್ನಾಟಕಗಣಿ ಪರಿಸರ ಪುನಶ್ಚೇತನ ನಿಗಮ)ದಲ್ಲಿ ಸುಮಾರು ೩೦ ಸಾವಿರ ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಈ ಹಣವನ್ನುಗಣಿ ಬಾಧಿತವಲ್ಲದ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದನ್ನು ಸ್ಥಗಿತಗೊಳಿಸಿ, ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.ಬಳ್ಳಾರಿ ನಗರಕ್ಕೆ ೨೪ x ೭ ಕುಡಿಯುವ ನೀರು ಪೂರೈಕೆ ಯೋಜನೆಗೆ ಕೆಎಂಇಆರ್‌ಸಿ ನೀಡಿರುವ ಅನುಮೋದನೆಯನ್ನು ಹಿಂಪಡೆಯಬೇಕು. ಈ ಯೋಜನೆ ಸಂಪೂರ್ಣವಾಗಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಯೋಜನೆಯಾಗಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಬೆಡ್ ನಿರ್ಮಾಣ ಕಾರ್ಯಕ್ಕೆ ನೀಡಿರುವ ಕ್ರಿಯಾಯೋಜನೆಯನ್ನು ಹಿಂಪಡೆಯಬೇಕು. ಗಣಿ ಬಾಧಿತ ಪ್ರದೇಶವಾಗಿರುವ ತಾಲೂಕಿನಲ್ಲಿ ನರೇಗಾದಡಿಯಲ್ಲಿ ಹೆಚ್ಚುವರಿಯಾಗಿ ೧೦೦ ದಿನಗಳ ಉದ್ಯೋಗ ಸೃಷ್ಟಿಸಲು ಅನುದಾನ ನೀಡಬೇಕು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಡೂರು ಪಟ್ಟಣವನ್ನು ನರೇಗಾ ಯೋಜನೆಯಡಿಯಲ್ಲಿ ಸೇರಿಸಿ, ಇಲ್ಲಿನ ಅರ್ಹ ಕುಟುಂಬಕ್ಕೆ ಉದ್ಯೋಗ ನೀಡಬೇಕು.
ರಾಮಘಡ ಮತ್ತು ಕಮ್ಮತ್ತೂರು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ರಾಜ್ಯದಲ್ಲಿಯೇ ಮಾದರಿ ಗ್ರಾಮಗಳನ್ನಾಗಿ ಮಾಡಬೇಕು. ತುಂಗಭದ್ರಾ ನದಿಯಿಂದ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಆರಂಭಿಸಬೇಕು.ಅಖಂಡ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬರುವಗಣಿ ಬಾಧಿತ ಗ್ರಾಮಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸರ್ವೇ ಮಾಡಬೇಕು. ಗಣಿಗಾರಿಕೆಯಿಂದ ಹಾಳಾಗಿರುವ ಅರಣ್ಯ ಪ್ರದೇಶದಲ್ಲಿ ಪರಿಸರ ಪುನಶ್ಚೇತನ ಕಾರ್ಯ ಕೈಗೊಂಡಿರುವುದರಿಂದ, ಗಣಿ ಬಾಧಿತ ನಾಲ್ಕು ಜಿಲ್ಲೆಗಳಲ್ಲಿ ಬುರವ ಗಣಿಗಳಿಗೆ ಅದಿರು ಉತ್ಪಾದನೆಯ ಮಿತಿಯನ್ನು ಹೆಚ್ಚಿಸದಂತೆ, ೨೪ x ೭ ಗಣಿಗಾರಿಕೆ, ಸಾಗಾಣಿಕೆ ಮಾಡದಂತೆ ಹಾಗೂ ಹೊಸ ಅರಣ್ಯ ಪ್ರದೇಶವನ್ನು ಕಡಿದು ಗಣಿಗಾರಿಕೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಆದೇಶ ಮಾಡಬೇಕು ಮುಂತಾದವು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಇವುಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಟಿ.ಎಂ. ಶಿವಕುಮಾರ್, ಈರಣ್ಣ ಮೂಲಿಮನೆ, ಟಿ.ಕೆ. ಮಂಜುನಾಥ, ಜಿ.ಕೆ. ನಾಗರಾಜ, ಪೆನ್ನಪ್ಪ, ಎಂ.ಎಲ್.ಕೆ. ನಾಯ್ಡು, ಮಹೇಶ, ಅಚ್ಯುತಕುಮಾರ್, ಪ್ರವೀಣ, ಸುಭಾನಿ, ಈಶ್ವರಮ್ಮ, ಸೋಮಕ್ಕ, ಬಿ.ಜಿ. ಮಂಜುಳಾ, ಗಂಗಮ್ಮ, ಮಂಜುನಾಥ, ಪರಮೇಶಿ, ವಿರುಪಾಕ್ಷ, ಚಂದ್ರಶೇಖರ ಮೇಟಿ, ಹನುಮಂತಪ್ಪ, ಜಿ.ಕೆ. ರಮೇಶ, ತಾವರೆ ನಾಯ್ಕ, ರವಿಕುಮಾರ್, ಇಮಾಮ್ ಬಾಷ, ಶಾಂತಪ್ಪ, ನಾಗರಾಜ್, ಚಂದ್ರಶೇಖರ, ಮಾಬುಬಾಷ, ಎ. ಸ್ವಾಮಿ ಮುಂತಾದವರಿದ್ದರು.