ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ

KannadaprabhaNewsNetwork |  
Published : Feb 14, 2026, 03:30 AM IST
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಲು ಆಗ್ರಹಿಸಿ ಮನವಿ | Kannada Prabha

ಸಾರಾಂಶ

ಗೃಹ ರಕ್ಷಕರ ಪ್ರಮುಖ ಬೇಡಿಕೆಗಳಾದ ಸಾಂದರ್ಭಿಕ ಕರ್ತವ್ಯಕ್ಕೆ ಬದಲಾಗಿ 365 ದಿನ ಪೂರ್ಣಾವಧಿ ಕರ್ತವ್ಯ ನೀಡಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ಗೃಹ ರಕ್ಷಕರಿಗೆ ಸಾಂದರ್ಭಿಕ ಕರ್ತವ್ಯದ ಬದಲಾಗಿ ವರ್ಷಪೂರ್ತಿ ಪೂರ್ಣಾವಧಿ ಕರ್ತವ್ಯ ನೀಡಬೇಕು ಎಂದು ಆಗ್ರಹಿಸಿ ಗೃಹ ರಕ್ಷಕರ ಪೋಷಕರ ಹಕ್ಕು ಸಂರಕ್ಷಣಾ ಸಮಿತಿ (ಲೇಬರ್‌ ರೈಟ್ಸ್ ಫೋರಂ) ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಸದಸ್ಯ ಅಮಿನೂದ್ದೀನ್‌ ಮೋತಿಭಾಯಿ ಮಾತನಾಡಿ, ರಾಜ್ಯದಲ್ಲಿ 21,327 ಪುರುಷರು ಮತ್ತು 4,555 ಮಹಿಳೆಯರು ಸೇರಿ ಒಟ್ಟು 25,882 ಗೃಹ ರಕ್ಷಕರಿದ್ದು, ರಾಜ್ಯಾದ್ಯಂತ 426 ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳ ಚುನಾವಣೆ ಕರ್ತವ್ಯ, ತುರ್ತು ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ನಾಡ ಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತ್ ಸೇರಿದಂತೆ ವರ್ಷದಲ್ಲಿ 3 ತಿಂಗಳು ಮಾತ್ರ ಕರ್ತವ್ಯ ಸಿಗುತ್ತದೆ. ಉಳಿದ ಒಂಭತ್ತು ತಿಂಗಳು ಗೃಹ ರಕ್ಷಕರ ಜೀವನ ಚಿಂತಾಜನಕವಾಗಿರುತ್ತದೆ. ಈ ರೀತಿ ಅತಂತ್ರ ಕೆಲಸದಿಂದ ಗೃಹ ರಕ್ಷಕರಿಗೆ ಮದುವೆಯಾಗಲು ಯಾರು ಹೆಣ್ಣುಕೊಡಲು ಮುಂದೆ ಬರುತ್ತಿಲ್ಲ. ಸಾವಿರಾರು ಗೃಹರಕ್ಷಕರು ಮದುವೆಯಾಗದೆ ಉಳಿದಿರುತ್ತಾರೆ. ಎಂಎ, ಎಲ್‌ಎಲ್‌ಬಿ, ಬಿಎ, ಬಿಇಡಿ ಇನ್ನು ಅನೇಕ ಪದವಿಗಳನ್ನು ಪಡೆದವರು ಒಟ್ಟು 5 ಸಾವಿರಕ್ಕೂ ಹೆಚ್ಚು ಪದವೀಧರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಗೃಹರಕ್ಷಕರ ಕುಟುಂಬ ಹಾಗೂ ಪೋಷಕರಿಗೆ ತೊಂದರೆಯಲ್ಲಿದ್ದು, ಆಂಧ್ರ ಮತ್ತು ತೆಲಂಗಾಣ ಹಾಗೂ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಕೂಡ ಪೂರ್ಣಾವಧಿ ಕರ್ತವ್ಯ ನೀಡಬೇಕೆಂದು ವಿನಂತಿಸಿದರು.

ಗೃಹ ರಕ್ಷಕರ ಪ್ರಮುಖ ಬೇಡಿಕೆಗಳಾದ ಸಾಂದರ್ಭಿಕ ಕರ್ತವ್ಯಕ್ಕೆ ಬದಲಾಗಿ 365 ದಿನ ಪೂರ್ಣಾವಧಿ ಕರ್ತವ್ಯ ನೀಡುವುದು. ಎಲ್ಲ ಗೃಹ ರಕ್ಷಕರಿಗೂ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ರೀತಿ ಒಂದು ಸಾವಿರ ರು. ಸಮಾನ ವೇತನ, ಪೂರ್ಣಾವಧಿ ಕರ್ತವ್ಯ ನೀಡುವವರೆಗೂ ಹೊಸ ನೇಮಕಾತಿ ತಡೆಯುವುದು. ಪೊಲೀಸ್ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ಮೇರೆಗೆ ಶೇ.50 ಮೀಸಲಾತಿ, ಉಚಿತ ದ್ವಿಚಕ್ರ ವಾಹನದ ಜೊತೆಗೆ ಎಎಸ್ಐ ಮಟ್ಟದ ಗೌರವ ನೀಡಬೇಕು. ಕಾರ್ಮಿಕ ಇಲಾಖೆಯಿಂದ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು. ತಾಲೂಕು ಮತ್ತು ಜಿಲ್ಲೆಗಳಿಗೆ ಸೇರಿದಂತೆ ಎಲ್ಲ ಕಡೆ ಉಚಿತ ಬಸ್‌ಪಾಸ್, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸಬೇಕು ಹಾಗೂ ಎಲ್ಲ ಗೃಹ ರಕ್ಷಕರಿಗೂ ವಸತಿ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಿದರು.

ಗೃಹ ರಕ್ಷಕರಾದ ಎ.ಡಿ.ವಾಲಿಕಾರ, ಶೋಭಾ ಹಿರೇಮಠ, ಎಲ್.ಪಿ.ಮುಲ್ಲಾ, ಮಹೆಬೂಬ ನಾಯ್ಕೋಡಿ, ಎ.ಬಿ.ಮಕ್ತದಾರ ಸೇರಿದಂತೆ ನೂರಾರು ಗೃಹ ರಕ್ಷಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ವಿಬಿ ಜಿ ರಾಮಜಿ ಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ