ಹೆಣ್ಣುಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಶಿಕ್ಷಣ, ಸೌಲಭ್ಯ ನೀಡಿ: ಗೀತಾ

KannadaprabhaNewsNetwork | Published : May 17, 2024 12:35 AM

ಸಾರಾಂಶ

ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ದಿಗ್ಬಂಧನ ಹೇರಿ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬಾರದು.

ಮುಂಡಗೋಡ: ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಪ್ರತಿಭೆಯನ್ನು ತೋರ್ಪಡಿಸಬೇಕೆಂಬ ಛಲ ಪ್ರತಿಯೊಬ್ಬ ಮಹಿಳೆಯರಲ್ಲಿ ಬರಬೇಕಿದೆ ಎಂದು ಎಎಸ್ಐ ಗೀತಾ ಕಲಘಟಗಿ ತಿಳಿಸಿದರು.

ಬುಧವಾರ ಪಟ್ಟಣದ ಲೊಯೋಲ ವಿಕಾಸ ಕೇಂದ್ರದ ಆವರಣದಲ್ಲಿ ಲೊಯೋಲ ಜನಸ್ಫೂರ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಮುಂಡಗೋಡ, ಸಂತ ಜೋಸೆಫರ ಕಾನೂನು ಮಹಾವಿದ್ಯಾಲಯ, ಬೆಂಗಳೂರು ಹಾಗೂ ಲೊಯೋಲ ವಿಕಾಸ ಕೇಂದ್ರ, ಮುಂಡಗೋಡ ಇವರ ಆಶ್ರಯದಲ್ಲಿ ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ ಎನ್ನುವ ೨೦೨೪ನೇ ವರ್ಷದ ಶೀರ್ಷಿಕೆಯಡಿ ಸಂಘಟಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ದಿಗ್ಬಂಧನ ಹೇರಿ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬಾರದು. ಬದಲಾಗಿ ಗಂಡುಮಕ್ಕಳಂತೆಯೆ ಹೆಣ್ಣುಮಕ್ಕಳಿಗೂ ಶಿಕ್ಷಣ, ಕ್ರೀಡೆ ಹೀಗೆ ಎಲ್ಲ ರಂಗದಲ್ಲಿಯು ಸಮಾನ ಅವಕಾಶ ಮಾಡಿಕೊಡುವ ಜವಾಬ್ದಾರಿ ಪಾಲಕರದ್ದಾಗಿದೆ. ಚಿಕ್ಕವರಿದ್ದಾಗ ನಮ್ಮ ತಂದೆ- ತಾಯಿ ನಮಗೆ ಸಹಾಯ ಮಾಡಲಿಲ್ಲ, ಬೇಗ ಮದುವೆ ಮಾಡಿ ಬಿಟ್ಟರು ಎಂದು ನಾವು ಹೇಳುವ ಹಾಗೆಯೇ ನಮ್ಮ ಮಕ್ಕಳು ಕೂಡ ಮುಂದೆ ಹೇಳದಂತೆ ಬಾಲ್ಯದಿಂದಲೇ ಸಿಗಬೇಕಾದ ಎಲ್ಲ ಸವಲತ್ತು ಒದಗಿಸಿ ಉತ್ತಮ ಶಿಕ್ಷಣ ನೀಡಿ ಉನ್ನತ ಮಟ್ಟಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದರು. ಬೆಂಗಳೂರಿನ ಸಂತ ಜೋಸೆಫ್‌ ಮಹಾವಿದ್ಯಾಲಯದ ನಿರ್ದೇಶಕ ಜೆರಾಲ್ಡ್ ಡಿಸೋಜಾ ಮಾತನಾಡಿ, ಮಹಿಳೆಯಿಂದ ಮನೆ ಹಾಗೂ ಮಹಿಳೆಯಿಂದ ಸಮಾಜದ ಅಭಿವೃದ್ದಿ ಎಂಬ ಮಾತಿದೆ. ಈ ಮಾತು ನಿಜವಾಗಬೇಕಾದರೆ ಮೊದಲು ಮಹಿಳೆಯರು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ ಮಾತನಾಡಿ, ಹೆಣ್ಣುಮಕ್ಕಳು ಮನೆಗೆ ಮಾತ್ರ ಸೀಮಿತ ಎಂಬ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ಭೂಮಿಯಿಂದ ಗಗನದವರೆಗೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಗಗನಯಾತ್ರೆಯಂಥ ದೊಡ್ಡ ಸಾಧನೆ ಮಾಡಿದ ಕಲ್ಪನಾ ಚಾವ್ಲಾ ಕೂಡ ಒಬ್ಬ ಮಹಿಳೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಲೊಯೋಲಾ ವಿಕಾಸ ಸಂಸ್ಥೆ ನಿರ್ದೇಶಕ ಅನಿಲ ಡಿಸೋಜಾ ಮಾತನಾಡಿ, ಮಹಿಳಾ ಸಂಘಟನೆಯ ಬಲವರ್ಧನೆ ಹಾಗೂ ಆರ್ಥಿಕ ಸಬಲಿಕರಣಕ್ಕಾಗಿ ಸುಮಾರು ೧೮ ವರ್ಷದಿಂದ ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ವಿವಿಧ ಸಂಘಟನೆಗಳ ಮೂಲಕ ಗ್ರಾಮಾಭಿವೃದ್ಧಿ ಸಮಿತಿಗಳನ್ನು ರಚಿಸಿ ಕೆಲಸ ಮಾಡಲಾಗುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೂಪಾ ಅಂಗಡಿ, ಹಾನಗಲ್ಲ ಎಲ್‌ವಿಕೆ ನಿರ್ದೇಶಕ ಜೆರಾಲ್ಡ್ ಡಿಸೋಜಾ, ಲಿಯೋ ಪ್ಲಾರೆನ್ಸ್, ದಂತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ, ಸರೋಜಾ ಚವ್ಹಾಣ, ಸಿಸ್ಟರ್ ಗ್ಲ್ಯಾಡಿಸ್, ನಕ್ಲೂಬಾಯಿ ಕೋಕರೆ, ಸಿಸಿಲಿಯಾ ರೋಡಿಗ್ರಸ್ ಮುಂತಾದವರು ಉಪಸ್ಥಿತರಿದ್ದರು. ಅಂಜನಾ ತಹಸೀಲ್ದಾರ ಸ್ವಾಗತಿಸಿದರು. ಸುನೀತಾ ಗೌಳಿ ನಿರೂಪಿಸಿದರು. ಗೌರಮ್ಮಾ ಕೋಣನಕೇರಿ ಸಂವಿಧಾನ ಪ್ರಸ್ತಾವನೆ ಮಾಡಿದರು. ಶ್ರೀದೇವಿ ವಂದಿಸಿದರು. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸ್ವ- ಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Share this article