ಕನ್ನಡಪ್ರಭ ವಾರ್ತೆ ಮಡಿಕೇರಿ
ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗೆ ಆಸ್ತಿ, ಅಂತಸ್ತು ಸಂಪಾದಿಸುವದಕ್ಕಿಂತ ಉತ್ತಮ ಆರೋಗ್ಯ ಒದಗಿಸುವುದು ಸೂಕ್ತ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದ್ದಾರೆ.ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರುಣಾ ಟ್ರಸ್ಟ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಆ್ಯಂಟಿ ಮೈಕ್ರೋಬಿಯಲ್ ಸ್ಟೀವರ್ಡ್‌ಶಿಪ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಪರಿಸ್ಥಿತಿಯಲ್ಲಿ ನಾವುಗಳು ನಮಗರಿಯದೆ ಔಷಧ ಬೆರಸಿದ ಆಹಾರಗಳನ್ನು ಸೇವಿಸುತ್ತಿದ್ದು ಇದು ವಿಷೇಶವಾಗಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಇಂತಹ ದುಷ್ಪರಿಣಾಮಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿರುವುದು ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಫ್ಲೋರಿಡಾ ಯುನಿವರ್ಸಿಟಿ ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ. ಕಲಿಯಾಟಂಡ ಜೀವನ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಶಾಸಕ ಪೊನ್ನಣ್ಣ ಸಮಯ ನೀಡಿ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಕರು ಕಾರ್ಯಕ್ರಮದ ಆಯೋಜಕ ಗಣೇಶ್, ಡಾ. ನೈರಿನ್ ಶೇಖ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ವಲಯ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಂಕಜ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ತೆನ್ನಿರ ಮೈನಾ, ಕರುಣಾ ಟ್ರಸ್ಟ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್, ಕೀಕಿರ ವಸಂತ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಸ್ವಯಂ ಸೇವಕರು, ಸ್ಥಳೀಯರು ಉಪಸ್ಥಿತರಿದ್ದರು. ಪ್ರೊ. ಚಂದ್ರಶೇಖರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.