ನಿವೃತ್ತ ಸೈನಿಕರಿಗೆ ಸರ್ಕಾರಿ ಜಮೀನು, ನಿವೇಶನ ಕೊಡಿಸಿ

KannadaprabhaNewsNetwork | Published : Apr 23, 2025 12:37 AM

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾಜಿ ಸೈನಿಕರಿಗೆ ಸಿಗಬೇಕಾದ ನಿವೇಶನ, ಜಮೀನು ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಮಾಜಿ-ಅರೆ ಸೇನಾಪಡೆಗಳ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಕುಟುಂಬ ಸಮೇತ ಶಾಸಕರ ನಿವಾಸಕ್ಕೆ ನಿಯೋಗ ತೆರಳಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಮಾಡಿದ್ದಾರೆ.

- ಜಗಳೂರು ಶಾಸಕರಿಗೆ ಮಾಜಿ-ಅರೆ ಸೇನಾಪಡೆಗಳ ಕ್ಷೇಮಾಭಿವೃದ್ಧಿ ಸಂಘ ಮನವಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾಜಿ ಸೈನಿಕರಿಗೆ ಸಿಗಬೇಕಾದ ನಿವೇಶನ, ಜಮೀನು ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕು ಮಾಜಿ-ಅರೆ ಸೇನಾಪಡೆಗಳ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಕುಟುಂಬ ಸಮೇತ ಶಾಸಕರ ನಿವಾಸಕ್ಕೆ ನಿಯೋಗ ತೆರಳಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಮಾಡಿದರು.

ಸಂಘದ ಗೌರವ ಅಧ್ಯಕ್ಷ ಬಿ.ಎಲ್. ಪ್ರಹ್ಲಾದ ರೆಡ್ಡಿ ಮಾತನಾಡಿ, ಭಾರತೀಯ ಸೇನೆಯಲ್ಲಿ () ಸೈನಿಕರು ಎರಡು ದಶಕಗಳ ಕಾಲ ನಿರಂತರವಾಗಿ ಕುಟುಂಬ ತೊರೆದು, ದಟ್ಟ ಕಾಡಿನಲ್ಲಿ ಸೇವೆ ಸಲ್ಲಿಸಿದ್ದೇವೆ. ಮಳೆ, ಚಳಿ, ಗಾಳಿಯಲ್ಲಿ ಭಾರತಾಂಬೆ ಸೇವೆಗೈದು ನಿವೃತ್ತಿ ಹೊಂದಿದ್ದೇವೆ. ಇಂಥ ಸೈನಿಕರ ಬದುಕಿಗೆ ಭದ್ರತೆಯೇ ಇಲ್ಲವಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಕ್ಕಾಗಿ ಜಿಲ್ಲಾಧಿಕಾರಿ, ತಾಲೂಕು ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ. ನಮ್ಮ ಗೋಳು ಕೇಳುವವರೇ ಇಲ್ಲವಾಗಿದೆ. ಸಂಸದರು ಹಾಗೂ ಶಾಸಕರು ನಮ್ಮ ಶ್ರಮ, ಸೇವೆ ಮನಗಂಡು ಪರಿಶೀಲನೆ ನಡೆಸಿ, ಸರ್ಕಾರದಿಂದ ಸಿಗಬೇಕಾದ ಸೂರು, ಜಮೀನು ಒದಗಿಸಿ ನ್ಯಾಯ ಕೊಡಿಸಬೇಕು ಎಂದರು.

ಶಾಸಕ ಬಿ.ದೇವೇಂದ್ರಪ್ಪ ಪ್ರತಿಕ್ರಿಯಿಸಿ, ಮಾಜಿ ಅರೆ (ನಿವೃತ್ತ) ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾಗಿರುವ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೂ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ವಿರೂಪಾಕ್ಷಿ, ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ನಾಗರಾಜ್, ವೀರಭದ್ರ, ಸಿದ್ದಪ್ಪ, ಹನುಮಂತಪ್ಪ, ಮಾರಪ್ಪ, ರಮೇಶ್, ಮಾರುತಿ, ಜಯದೇವ ನಾಯ್ಕ ಮತ್ತಿತರರು ಇದ್ದರು.

- - -

-22ಜೆ.ಜಿ.ಎಲ್.1.ಜೆಪಿಜಿ:

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

Share this article