ಗ್ರಾಮೀಣ ಜನರಿಗೆ ಶುದ್ಧ ನೀರು ಪೂರೈಕೆ, ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ಕೊಡಿ

KannadaprabhaNewsNetwork | Published : Mar 22, 2025 2:05 AM

ಸಾರಾಂಶ

ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಪುನಾರಚನೆಗೊಳಿಸಿ ಮೊದಲನೇ ಸಭೆ ನಡೆಸಲಾಗಿದೆ

ಹೊಸಪೇಟೆ: ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಹಾಗೂ ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಗ್ರಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಜಯನಗರ ಜಿಪಂ ಸಿಇಓ ಅಕ್ರಮ್ ಅಲಿ ಷಾ ತಿಳಿಸಿದರು.

ನಗರದ ಜಿಪಂ ಸಿಇಓ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಯೋಜನೆ, ಅನುಷ್ಠಾನ, ಮೇಲ್ವೀಚಾರಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಪುನಾರಚನೆಗೊಳಿಸಿ ಮೊದಲನೇ ಸಭೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜೆಜೆಎಂ ಮತ್ತು ಎಸ್‌ಬಿಎಂ(ಜಿ) ಹಂತದಲ್ಲಿ ಅನುಷ್ಠಾನಕ್ಕೆ ಸಮಿತಿಯ ಜವಾಬ್ದಾರಿ ಹೊಂದಿರುತ್ತದೆ. ಕಡ್ಡಾಯವಾಗಿ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲು ಕ್ರಮ ವಹಿಸಬೇಕು ಎಂದರು.

ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ಅಗತ್ಯವಿದ್ದರೇ ತುರ್ತು ಸಭೆಗಳನ್ನು ನಡೆಸಿ ಜಿಲ್ಲಾ ವ್ಯಾಪ್ತಿಯ ಎಲ್ಲ ಗ್ರಾಮೀಣ ಭಾಗಗಳಿಗೆ ನೀರು ಪೂರೈಕೆ ಮತ್ತು ನೈರ್ಮಲ್ಯ ಸಮಸ್ಯೆಗಳು ಉಂಟಾಗದಂತೆ ಕಾರ್ಯ ನಿರ್ವಹಿಸಬೇಕಿದೆ. ಈಗಾಗಲೇ ಗ್ರಾಪಂ ಮಟ್ಟದಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಗಳಿಗೆ ಪ್ರತ್ಯೇಕವಾಗಿ ಖಾತೆ ತೆರೆಯಲಾಗಿದೆ. ನೀರಿನ ತೆರಿಗೆಯನ್ನು ಈ ಖಾತೆಯ ಮೂಲಕ ನಿರ್ವಹಿಸಬೇಕು. ಜಲಜೀವನ್ ಮಿಷನ್ ಅಳವಡಿಕೆಯಿಂದಾಗಿ ಗ್ರಾಮೀಣ ಜನರಿಗೆ ನೀರಿನ ತೆರಿಗೆ ವೆಚ್ಚ ಕಡಿಮೆಯಾಗಲಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಲ್‌ ಜಲ್ ಮಿತ್ರ ಕಾರ್ಯಕ್ರಮದಡಿ ಅರ್ಹತಾ ಆಧಾರದ ಮೇಲೆ ಇಬ್ಬರು ಸ್ವ-ಸಹಾಯ ಸಂಘದ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಜಲಜೀವನ್ ಮಿಷನ್ ಯೋಜನೆಯ ನೀರು ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆಗಳ ನಿರ್ವಹಣೆಗೆ ಸೂಕ್ತ ತರಬೇತಿ ನೀಡಲಾಗುವುದು. ನೀರಿನ ಲಭ್ಯತೆ ಮತ್ತು ಕೊರತೆ ಹಾಗೂ ಸ್ವಚ್ಛತೆಯ ಬಗ್ಗೆ ಗ್ರಾಪಂ ಪಿಡಿಓಗಳು ಮತ್ತು ಗ್ರಾಪಂ ಎಂಜಿನಿಯರ್‌ಗಳು ಜಂಟಿ ತಪಾಸಣೆ ನಡೆಸಿ ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಸೂಚಿಸಿದರು.

ಈ ವೇಳೆ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಸಹಾಯವಾಣಿಯ ಪಂಚಮಿತ್ರ ಪೋಸ್ಟರ್‌ರನ್ನು ಬಿಡುಗಡೆಗೊಳಿಸಲಾಯಿತು.

ಕಡಬಗೇರಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ದೀಪಾ, ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಕಿರುಬನಂತನ್.ಆರ್.ಟಿ., ಡಿಎಚ್‌ಓ ಡಾ. ಎಲ್‌.ಆರ್‌. ಶಂಕರ್ ನಾಯ್ಕ, ಜಂಟಿ ಕೃಷಿ ನಿದೇರ್ಶಕ ಶರಣಪ್ಪ ಮುದಗಲ್, ಜಿಲ್ಲಾ ನಿರೂಪಣಾಧಿಕಾರಿ ಸುಭದ್ರಾದೇವಿ, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಶಾಷು ಮೊಹಿದ್ಧಿನ್, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸಿ.ಎಂ.ಮಹೇಶ್ವರಿ ಇದ್ದರು.

Share this article