ಬಡವರಿಗೆ ಮನೆ, ನಿವೇಶನ, ರೈತರಿಗೆ ಸಾಗುವಳಿ ಪತ್ರ ನೀಡಿ

KannadaprabhaNewsNetwork |  
Published : Nov 01, 2024, 12:18 AM ISTUpdated : Nov 01, 2024, 12:19 AM IST
37 | Kannada Prabha

ಸಾರಾಂಶ

ದಲಿತರು ಬದುಕಿದ್ದಾಗ ಒಂದು ನೆಮ್ಮದಿಯ, ಘನತೆಯ ಬದುಕನ್ನು ನೀಡದಿರುವ ಸರ್ಕಾರಗಳು, ಅವರ ಮರಣದ ಸಂದರ್ಭದಲ್ಲೂ ಹೂಳಲು ಸ್ಮಶಾನ ನೀಡುತ್ತಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಸರ್ಕಾರ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಬಡವರಿಗೆ ಮನೆ ನಿವೇಶನ, ರೈತರಿಗೆ ಸಾಗುವಳಿ ಪತ್ರ, ದಲಿತರಿಗೆ ಸ್ಮಶಾನ ಭೂಮಿ ಹಾಗೂ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಮಾಡುವಂತೆ ಸಿಪಿಐ (ಎಂ) ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ 24ನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮ್ಮೇಳನವು ನೂತನ ಸಮಿತಿ ಆಯ್ಕೆ ಸೇರಿದಂತೆ ಹಲವು ಜನಪರ ನಿರ್ಣಯಗಳನ್ನು ಕೈಗೊಂಡಿದೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಸ್ವಂತ ಮನೆ, ನಿವೇಶನವಿಲ್ಲದೆ ದುಬಾರಿ ಬಾಡಿಗೆ ಕಟ್ಟುತ್ತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ನಗರಾಭಿವೃದ್ದಿ ಪ್ರಾಧಿಕಾರವಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ಬಡವರಿಗೆ ಮನೆ-ನಿವೇಶನ ನೀಡಲು ಮುಂದಾಗದೇ ಕೇವಲ ರಿಯಲ್ ಎಸ್ಟೇಟ್ ಕುಳಗಳ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದೆ. ಒಂದೇ ಮನೆಯಲ್ಲಿ 2 ರಿಂದ 3 ಕುಟುಂಬಗಳು ವಾಸ ಮಾಡುತ್ತಿದ್ದು, ಸರ್ಕಾರ ಬಡವರಿಗೆ ಮನೆ ನೀವೇಶನ ನೀಡಬೇಕು. ಜಿಲ್ಲೆಯಲ್ಲಿ ಸುಮಾರು 16 ರಿಂದ 18 ಸಾವಿರ ಬಡ ರೈತರು ತುಂಡು ಭೂಮಿಯಲ್ಲಿ ಸಾಗುವಳಿ ಮಾಡುತ್ತಾ, ಸಾಗುವಳಿ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರ ಈ ಬಡವರ ಸಾಗುವಳಿ ಭೂಮಿಗೆ ಹಕ್ಕುಪತ್ರ ವಿತರಿಸದೆ ಶ್ರೀಮಂತರಿಗೆ ಭೂಮಿ ನೀಡಲು ಮುಂದಾಗಿ ಆ ಮೂಲಕ ಅನ್ನ ಬೆಳೆಯುವ ಬಡ ರೈತರಿಗೆ ಮೋಸ ಮಾಡುತ್ತಿದ್ದು, ತಕ್ಷಣವೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಒಂದು ಒತ್ತಾಯಿಸಲಾಯಿತು.

ದಲಿತರು ಬದುಕಿದ್ದಾಗ ಒಂದು ನೆಮ್ಮದಿಯ, ಘನತೆಯ ಬದುಕನ್ನು ನೀಡದಿರುವ ಸರ್ಕಾರಗಳು, ಅವರ ಮರಣದ ಸಂದರ್ಭದಲ್ಲೂ ಹೂಳಲು ಸ್ಮಶಾನ ನೀಡುತ್ತಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಸರ್ಕಾರ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು. ಒಂದು ಕಡೆ ವಿಪರೀತ ಬೆಲೆ ಏರಿಕೆ ಮತ್ತೊಂದೆಡೆ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ನೀಡದೆ ಕಾರ್ಮಿಕರ ಬದುಕು ದುಸ್ಥರವಾಗಿದೆ. ಬಂಡವಾಳಿಗರಿಗೆ ಕನಿಕರ ತೋರುವ ಸರ್ಕಾರಗಳು, ಕನಿಷ್ಠ ಕೂಲಿ ನೀಡದೆ ಕಾರ್ಮಿಕರನ್ನು ಶೋಷಿಸುತ್ತಿದೆ. ಆದ್ದರಿಂದ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಕೂಲಿ 31 ಸಾವಿರ ಜಾರಿ ಮಾಡಬೇಕು, ಸೇರಿದಂತೆ ಶಿಕ್ಷಣ, ಆರೋಗ್ಯ, ಕೋಮುವಾದದ ವಿರುದ್ಧ ಮುಂದಿನ ದಿನಗಳಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿ, ಕಾರ್ಯಕ್ರಮ ರೂಪಿಸಲು ಸಮ್ಮೇಳನವು ನಿರ್ಣಯ ಕೈಗೊಂಡಿದೆ.

ನೂತನ ಜಿಲ್ಲಾ ಸಮಿತಿ ಆಯ್ಕೆ:

ಇದೇ ವೇಳೆ 9 ಜನರ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾಗಿ- ಕೆ. ಬಸವರಾಜ್, ಜಿ. ಜಯರಾಂ, ಎನ್. ವಿಜಯಕುಮಾರ್, ಶಕುಂತಲಾ, ಬೆಳ್ತೂರು ವೆಂಕಟೇಶ್, ಮೆಹಬೂಬ್, ಲೀಲಾವತಿ ನಾಗೇಶ್ ಆಯ್ಕೆಯಾಗಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''