ಕನ್ನಡಪ್ರಭ ವಾರ್ತೆ ಸಾಗರ / ಬ್ಯಾಕೋಡು
ಕರೂರು ಹೋಬಳಿ ವ್ಯಾಪ್ತಿಯ ಕುದರೂರು, ಸಂಕಣ್ಣ ಶ್ಯಾನುಭೋಗ , ತುಮರಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಚಗೋಡಿನ ಬಳಿ ಗುಡ್ಡ ಕುಸಿದು ತೋಟಕ್ಕೆ ಹಾನಿಯಾಗಿರುವ ಪ್ರದೇಶ ಹಾಗೂ ಅಡಕೆ ಕೊಳೆ ರೋಗಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕೊಡಲೇ ಸೂಕ್ತ ವರದಿ ತಯಾರಿಸಿ ಅಗತ್ಯ ಪರಿಹಾರಕ್ಕೆ ಸೂಚಿಸಿ ನಂತರ ಕುದರೂರು ಪಂಚಾಯ್ತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಅಲ್ಲಲ್ಲಿ ಬೆಳೆ ಹಾನಿಯಾಗಿದ್ದು, ರೈತರ ಅರ್ಜಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ವೇಳೆ ಸ್ಥಳದಲ್ಲಿಯೇ ಕಾರ್ಗಲ್ ವಲಯ ಅರಣ್ಯಾಧಿಕಾರಿ ಇಲಾಖೆಗಳಿಗೆ ಕರೆ ಮಾಡಿ ಮಾಹಿತಿ ಪಡೆದ ಶಾಸಕರು ಸರಿಯಾಗಿ ಕೆಲಸ ಮಾಡದಿದ್ದರೆ ನೋಟಿಸ್ ನೀಡುವುದಾಗಿ ಎಚ್ಚರಿಸಿದರು.
ಈ ಹಿಂದೆ ಉರುಳಗಲ್ಲು ಪ್ರಕರಣದಲ್ಲಿ ರೈತರಿಗೆ ಸ್ಲೇಟು ಹಿಡಿದ ಪ್ರಕರಣದಲ್ಲಿ ಪ್ರಮೋದ್ ಎಂಬ ಅರಣ್ಯಾಧಿಕಾರಿಯನ್ನು ಪುನಃ ತುಮರಿಗೆ ವರ್ಗಾವಣೆ ಮಾಡು ವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಗರ ತಹಶೀಲ್ದಾರ್,ಚಂದ್ರಶೇಖರ್ ನಾಯಕ್,ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ,ಗುರುಕೃಷ್ಣ ಶೆಣೈ, ಕೆಡಿಪಿ ಸದಸ್ಯ, ಜಿ.ಟಿ. ಸತ್ಯನಾರಾಯಣ.ಕುದರೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ, ಸರಸ್ವತಿ ಗಣಪತಿ , ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಕೊಳೆರೋಗದಿಂದ ಬೆಳೆನಾಶ ಆತಂಕಕಾರಿ: ಬೇಳೂರು
ತಾಲ್ಲೂಕಿನ ಕರೂರು ಹೋಬಳಿಯ ವಿವಿಧ ಭಾಗಗಳ ಅಡಿಕೆ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೊಳೆರೋಗದಿಂದ ಶೇ.೬೦ರಷ್ಟು ಬೆಳೆ ನಾಶವಾಗಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೇಟಿ ಮಾಡಿದ ಅಡಕೆ ತೋಟಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಕೆ ಉದುರಿ ಹೋಗಿದೆ. ಬಿಸಿಲು ಮಳೆಯಿಂದ ಇನ್ನಷ್ಟು ಅಡಕೆ ಉದುರುವ ಸಾಧ್ಯತೆ ಇದೆ. ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದರು.ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಕೊಳೆರೋಗ ಪೀಡಿತ ಅಡಕೆ ತೋಟಗಳಿಗೆ ಹೆಕ್ಟೇರ್‌ಗೆ ೧೨೫೦೦ ರು. ಪರಿಹಾರ ನೀಡಿದ್ದರು. ಇದರಿಂದ ಬೆಳೆಗಾರರಿಗೆ ತಾತ್ಕಾಲಿಕ ಸಾಂತ್ವನ ಸಿಕ್ಕಂತೆ ಆಗಿತ್ತು. ನಂತರದ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಪರಿಹಾರ ಪರಿಪೂರ್ಣವಾಗಿ ಸಿಕ್ಕಿರಲಿಲ್ಲ. ಇದೀಗ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಗಳಾಗಿರುವುದರಿಂದ ಪರಿಹಾರ ಸಿಗಬಹುದು ಎನ್ನುವ ವಿಶ್ವಾಸ ಬೆಳೆಗಾರರಲ್ಲಿದೆ ಎಂದು ಹೇಳಿದರು.