ಸೂಪಾ ಡ್ಯಾಂ ಯೋಜನೆ ಸಂತ್ರಸ್ತರಿಗೆ ನ್ಯಾಯ ನೀಡಿ: ಜಯಂತ ತಿನೇಕರ ಆಗ್ರಹ

KannadaprabhaNewsNetwork |  
Published : Mar 12, 2026, 01:30 AM IST
ಹಳಿಯಾಳದಲ್ಲಿ ಜಯಂತ್ ತಿನೇಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸೂಪಾ ಡ್ಯಾಂ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಖಾನಾಪುರದ ಜಯಂತ ತಿನೇಕರ ಆಗ್ರಹಿಸಿದ್ದಾರೆ.

ರಾಜ್ಯ, ಕೇಂದ್ರ ಸರ್ಕಾರದ ವಿಳಂಬ ಧೋರಣೆಗೆ ಅಸಮಾಧಾನ

ಕನ್ನಡಪ್ರಭ ವಾರ್ತೆ ಹಳಿಯಾಳ

ಸೂಪಾ ಡ್ಯಾಂ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಮಾಹಿತಿ ಹಕ್ಕು ಹೋರಾಟಗಾರ ಖಾನಾಪುರದ ಜಯಂತ ತಿನೇಕರ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಳಂಬ ಧೋರಣೆ ಖಂಡಿಸಿದರು.

ಅಣೆಕಟ್ಟು ನಿರ್ಮಾಣದಿಂದ ಹಲವಾರು ರೈತರು ಭೂಮಿ ಕಳೆದುಕೊಂಡರೆ, ಇದೇ ಯೋಜನೆಯಲ್ಲಿ ಖಾನಾಪುರ ತಾಲೂಕಿನ ಅಕ್ರಾಳಿ, ಸೀತಾವಡೆ ಮತ್ತು ಅಡಾಳಿ ಗ್ರಾಮಗಳಿಂದ ಭೂಮಿ ಸ್ವಾಧೀನಪಡಿಸಿಕೊಂಡು ಅವರಿಗೆ ಜೋಯಿಡಾ ತಾಲೂಕಿನಲ್ಲಿ ರಾಮನಗರ ಎಂಬ ಪುನರ್ವಸತಿ ಪಟ್ಟಣ ನಿರ್ಮಾಣ ಮಾಡಿ ರಾಜ್ಯ ಸರ್ಕಾರ ನೀಡಿದೆ. ಆದರೆ ಯಾರಿಗೂ ಇನ್ನೂವರೆಗೂ ಅರ್ಹವಾದ ಜಮೀನು ಹಕ್ಕುಪತ್ರ ನೀಡಲಿಲ್ಲ. ಅಕ್ರಾಳಿ, ಸೀತಾವಡೆ ಮತ್ತು ಅಡಾಳಿ ಗ್ರಾಮಗಳನ್ನು ಜೋಯಿಡಾ ತಾಲೂಕು ಉತ್ತರ ಕನ್ನಡ ಜಿಲ್ಲೆಗೆ ವಿಲೀನಗೊಳಿಸಿದ್ದರೂ ಇನ್ನೂವರೆಗೂ ಆಡಳಿತಾತ್ಮಕ ದಾಖಲೆಗಳಲ್ಲಿ ಈ ವಿಲೀನ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಈ ಗ್ರಾಮಗಳ ನಿವಾಸಿಗಳ ಬದುಕು ಅತಂತ್ರವಾಗಿದೆ. ಖಾನಾಪುರ ತಾಲೂಕಿನಲ್ಲಿಯೂ ಅವರಿಗೆ ಜಮೀನಿನ ದಾಖಲೆ ಪತ್ರಗಳು ಲಭ್ಯವಾಗುತ್ತಿಲ್ಲ ಎಂದು ವಿವರಿಸಿದರು.

ಕಾಳಿ ಅಣೆಕಟ್ಟು ನಿರ್ಮಾಣವಾಗಿ ಆರು ದಶಕಗಳಾಗುತ್ತಾ ಬಂದರೂ ಈ ಯೋಜನೆಗೆ ಭೂಮಿ ತ್ಯಾಗ ಮಾಡಿದವರ ಬದುಕು ಅತಂತ್ರವಾಗಿದೆ. ರಾಮನಗರ ಗ್ರಾಮ ಅಧಿಕೃತ ಆಡಳಿತಾತ್ಮಕ ನೋಂದಾವಣೆಯನ್ನು ಇನ್ನೂವರೆಗೂ ಮಾಡಿಲ್ಲ. ಇದರ ಪರಿಣಾಮವನ್ನು ಈಗ ಸಂತ್ರಸ್ತರು ಎದುರಿಸಲಾರಂಭಿಸಿದ್ದಾರೆ. ಭೂಮಿ ಮಾರಾಟ ಮಾಡುವುದಾಗಲಿ ಅಥವಾ ಭೂಮಿಯ ಪೋಡಿ ಮಾಡುವುದಕ್ಕೂ ಅವರಿಗೆ ಆಗುತ್ತಿಲ್ಲ. ಈ ಕುರಿತು ರಾಮನಗರದ ನಿವಾಸಿಗಳು ಜೋಯಿಡಾ ತಹಸೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದರೆ, ಈ ಭೂಮಿ ಸರ್ಕಾರಕ್ಕೆ ಸಂಬಂಧಿಸಿದೆ, ನಿಮ್ಮ ಅರ್ಜಿ ನಮೂದಿಸಲು ಆಗುತ್ತಿಲ್ಲ ಎಂಬ ಉತ್ತರ ಬರುತ್ತದೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಸಹ ಈ ಸಮಸ್ಯೆ ಬಗೆಹರಿಸಲು ಗಮನಹರಿಸಲಿಲ್ಲ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಲೊಂಡಾದ ನಿವಾಸಿ ಸುಮಿತ ವಿಠ್ಠಲ ಕಾಸ್ಲೆಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಸಿಸಿ ಅಧ್ಯಕ್ಷ ಹರಿ ಇಂದು ಪದಗ್ರಹಣ - ಡಿಕೆಶಿಯಿಂದ ಪಕ್ಷದ ಸಾರಥ್ಯ ಹಸ್ತಾಂತರ
ಒಸಿ ಇಲ್ಲದ ಕಟ್ಟಡಗಳ ವಿದ್ಯುತ್‌ ಸಂಪರ್ಕಕ್ಕೆ 15 ದಿನ ಅರ್ಜಿ ಅವಕಾಶ