ಕನ್ನಡಪ್ರಭ ವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಬೇಲೂರು ಸೋಮಶೇಖರ್, ಅಂಬರೀಷ್ ಅವರನ್ನು ಕಳೆದುಕೊಂಡು ಎಂಟು ವರ್ಷಗಳಾಗಿದೆ. ಇನ್ನೂ ಅವರು ಅಭಿಮಾನಿಗಳು ಹಾಗೂ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಕರ್ತವ್ಯ ಎಂದು ಹೇಳಿದರು.
ರಾಜಕೀಯದಲ್ಲಿಯೂ ಪಕ್ಷಾತೀತವಾಗಿ ಎಲ್ಲ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಕಾವೇರಿ ಕೊಳ್ಳದ ರೈತರ ಹಿತ ಕಾಪಾಡಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಬದ್ಧತೆಯನ್ನು ಮೆರೆದಿದ್ದರು. ಮಂಡ್ಯ ಜಿಲ್ಲೆಯಲ್ಲಿ ಸಮುದಾಯ ಭವನಗಳು, ಕಾಂಪೌಂಡ್‌ಗಳು ಹಾಗೂ ಪ್ರಮುಖ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಅಂಬರೀಷ್ ಅವರ ಕೊಡುಗೆ ಮಹತ್ವದ್ದಾಗಿದೆ. ಮಂಡ್ಯ ವೈದ್ಯಕೀಯ ಕಾಲೇಜು ಸೇರಿದಂತೆ ರಾಜ್ಯದ ಆರು ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ದೊರಕಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.ಬೇರೆ ಬೇರೆ ನಗರಗಳಲ್ಲಿ ಅಂಬರೀಷ್ ಅವರ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಅವರ ತವರು ಜಿಲ್ಲೆಯಾದ ಮಂಡ್ಯ ನಗರದಲ್ಲಿ ಪುತ್ಥಳಿ ಇಲ್ಲದಿರುವುದು ಅಭಿಮಾನಿಗಳಿಗೆ ನೋವುಂಟುಮಾಡಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಹಿಂದಿನ ಅಧ್ಯಕ್ಷ ಎಚ್.ಎಸ್.ಮಂಜು ಅವರ ಅವಧಿಯಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದ ಸರ್ಕಾರಿ ನಿಯಮಗಳ ಕಾರಣದಿಂದ ಪ್ರಸ್ತಾವನೆ ಮುಂದುವರಿಯಲಿಲ್ಲ ಎಂದರು.
ಅಂಬರೀಷ್ ಅವರ ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳೇ ಹಣ ಸಂಗ್ರಹಿಸಿ ಸಂಪೂರ್ಣ ವೆಚ್ಚ ಭರಿಸಲು ಸಿದ್ಧರಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನವನ್ನು ಕೇಳುತ್ತಿಲ್ಲ. ಮಂಡ್ಯ ನಗರದಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ಅಭಿಮಾನಿಗಳೇ ಆಳೆತ್ತರದ ಪುತ್ಥಳಿಯನ್ನು ನಿರ್ಮಿಸುತ್ತೇವೆ ಎಂದು ಬೇಲೂರು ಸೋಮಶೇರ್ಖ ಮನವಿ ಮಾಡಿದರು.