ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೆಸ್ಕಾಂನಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕರೆಯಲಾದ ಟೆಂಡರ್ ರದ್ದುಪಡಿಸಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಗುತ್ತಿಗೆದಾರರು ಚಿತ್ರದುರ್ಗ ಬೆಸ್ಕಾಂ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.ಮೂರು ಜಿಲ್ಲೆಗಳ 24 ತಾಲೂಕುಗಳಿಂದ ಆಗಮಿಸಿದ್ದ ಸುಮಾರು 200ಕ್ಕೂ ಅಧಿಕ ಗುತ್ತಿಗೆದಾರರು ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದರು. ಬೆಸ್ಕಾಂ ಉನ್ನತ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದರು. ಬೆಸ್ಕಾಂ ಇಲಾಖೆಯಲ್ಲಿ ಕಾಮಗಾರಿಗಳ ಟೆಂಡರ್ ಇಲಾಖಾವಾರು ಬೃಹತ್ ಪ್ರಮಾಣದಲ್ಲಿ ನಡೆದಿದ್ದು, ಇದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
5 ಲಕ್ಷ ರು. ಒಳಗಿನ ಸಣ್ಣ ಕಾಮಗಾರಿಗಳ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡಬೇಕು ಎಂದು ಸರ್ಕಾರವೇ ಹೇಳಿದೆ. ಆದರೆ, ಇತ್ತೀಚೆಗೆ ಇಲಾಖೆಯಿಂದ ಸಣ್ಣ ಕಾಮಗಾರಿಗಳನ್ನೆಲ್ಲಾ ಒಟ್ಟುಗೂಡಿಸಿ ಇಲಾಖಾವಾರು ಟೆಂಡರ್ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಬೆಸ್ಕಾಂ ಸಂಬಂಧಿಸಿದ ಸಣ್ಣ ಪುಟ್ಟ ಕಷ್ಟದ ಕೆಲಸಗಳನ್ನು ಸ್ಥಳೀಯ ಗುತ್ತಿಗೆದಾರರರು ಕೈಯಿಂದ ಹಣ ಖರ್ಚು ಮಾಡಿ, ತಾವೇ ಮೆಟಿರಿಯಲ್ ಜೋಡಿಸಿಕೊಂಡು ಮಾಡಿ ಕೊಡುತ್ತಿದ್ದೇವೆ. ಈ ಕೆಲಸಗಳಿಗೆ, ಮೆಟಿರಿಯಲ್‌ಗಳಿಗೆ ಹೇಗೆ ಬಿಲ್ ಹೊಂದಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ಯಾಕೇಜ್ ಮಾದರಿ ಗುತ್ತಿಗೆ ರದ್ದುಪಡಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಸರಿಯಾಗಿ ಕೆಲಸ ಮಾಡದ, ಬೆಸ್ಕಾಂ ಇಲಾಖೆಯಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡಿರುವ ಸೆಕ್ಷನ್ ಆಫೀಸರ್(ಎಸ್‌ಓ)ಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಎಸ್.ಮಂಜುನಾಥ್, ಉಪಾಧ್ಯಕ್ಷರಾದ ಅಬ್ದುಲ್ ಹನ್ಸಾನ್, ಎಂ.ಕೆ.ಷಣ್ಮುಖಪ್ಪ, ಜಿಲ್ಲಾ ಕಾರ್ಯದರ್ಶಿ ಜಿ.ಪಿ.ಮಂಜಪ್ಪ, ಜಂಟಿ ಕಾರ್ಯದರ್ಶಿ ಓಂಪ್ರಕಾಶ್, ಸೈಯದ್ ಶಫಿ, ಮಾರುತೇಶ ರೆಡ್ಡಿ, ದಾವಣಗೆರೆ ಜಿಲ್ಲಾಧ್ಯಕ್ಷ ರವಿಕುಮಾರ್, ಪರಿಶಿಷ್ಟ ವರ್ಗದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮಣ್, ತುಮಕೂರು ಜಿಲ್ಲಾಧ್ಯಕ್ಷ ಅಶೋಕ್, ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಇತರರು ಇದ್ದರು.