ಸಮಾಜ ಸೇವೆ ಮಾಡಲು ನನಗೆ ಅವಕಾಶ ಕೊಡಿ

KannadaprabhaNewsNetwork | Published : Apr 17, 2024 1:20 AM

ಸಾರಾಂಶ

ದೇಶ ಕಾಯುವ ಕೆಲಸ ಮಾಡಿ ನಿವೃತ್ತನಾಗಿರುವ ನನಗೆ ಮತ ಕೊಟ್ಟು ಭ್ರಷ್ಟಾಚಾರ ಮುಕ್ತ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮಾಜಿ ಸೈನಿಕ ಹಾಗೂ ಹಾಸನ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಜೆ.ಡಿ. ಬಸವರಾಜ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶ ಕಾಯುವ ಕೆಲಸ ಮಾಡಿ ನಿವೃತ್ತನಾಗಿರುವ ನನಗೆ ಮತ ಕೊಟ್ಟು ಭ್ರಷ್ಟಾಚಾರ ಮುಕ್ತ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮಾಜಿ ಸೈನಿಕ ಹಾಗೂ ಹಾಸನ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಜೆ.ಡಿ. ಬಸವರಾಜ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಯಾಗಬೇಕೆಂದರೆ ರೈತ ಮತ್ತು ಯೋಧರ ಪಾತ್ರ ಅತ್ಯಂತ ಮುಖ್ಯವಾಗುತ್ತಾರೆ. ಇವರಿಬ್ಬರು ಸಮೃದ್ಧವಾಗಿ ಮತ್ತು ಸದೃಢವಾಗಿದ್ದರೆ ದೇಶ ಸುಭಿಕ್ಷವಾಗಿರುತ್ತದೆ. ನಾನು ದೇಶ ಕಾಯುವ ಪುಣ್ಯದ ಕೆಲಸವನ್ನು ಮಾಡಿ ಬಂದವನು. ಭಾರತೀಯ ಸೇನೆಯ ಸೈನಿಕನಾಗಿ ದೇಶಕ್ಕಾಗಿ ನಾನು ಕುಟುಂಬವನ್ನು ಬಿಟ್ಟು ದೂರದ ಊರಲ್ಲಿ ಭಾರತೀಯ ಸೈನ್ಯದ ಸೈನಿಕನಾಗಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದ್ದು, ಬೇರೆ ರೂಪದಲ್ಲಿ ಸಾಮಾಜಿಕ ಸೇವೆ ಮಾಡುವುದಕ್ಕೆ ಸಿದ್ಧನಾಗಿದ್ದೇನೆ.

ಹಾಸನದಲ್ಲಿ ಸೈನಿಕ ಶಾಲೆ ಮಾಡಬೇಕು: ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಭಾರತದ ಭವಿಷ್ಯ ಭದ್ರವಾಗಿರಬೇಕೆಂದರೆ ನಮ್ಮ ಯುವ ಸಮಾಜ ಗಟ್ಟಿಯಾಗಿರಬೇಕು. ಯುವ ಸಮಾಜದಲ್ಲಿ ನಾಯಕತ್ವ, ದೇಶ ಪ್ರೇಮ, ಸಮಾಜ ಸೇವರ ಸಮಾನೋಭಾವನೆ ಇರಬೇಕು ಎಂದರು. ಹಾಸನದಲ್ಲಿ ಒಂದು ಸೈನಿಕ ಶಾಲೆ ಮಾಡಿ ನಮ್ಮ ಹಾಸನದ ಯುವ ಸಮಾಜವನ್ನು ಸಮರ್ಥ ಸಮಾಜವನ್ನಾಗಿ ಮಾಡಬೇಕೆನ್ನುವುದು ನನ್ನ ಕನಸಾಗಿದೆ ಎಂದರು.

ನಮ್ಮಲ್ಲಿ ಸೇನೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಹೊತ್ತವರು ಸಾಕಷ್ಟು ಮಂದಿಯಿದ್ದಾರೆ. ಅಂತವರಿಗೆಂದು ನಮ್ಮ ಕ್ಷೇತ್ರದಲ್ಲಿ ಒಂದು ಅರ್ಮ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯನ್ನು ತೆರೆಯಬೇಕಿದೆ. ಮೊದಲೆಲ್ಲ ಉನ್ನತ ವಿದ್ಯಾಭ್ಯಾಸ ಪಡೆಯಬೇಕೆಂದರೆ ಬೆಂಗಳೂರೋ ಅಥವಾ ಇನ್ನಾವುದೋ ದೊಡ್ಡ ನಗರಕ್ಕೇ ಹೋಗಬೇಕಿತ್ತು. ಆದರೆ ಈಗ ನಮ್ಮ ಹಾಸನದಲ್ಲಿಯೇ ಮೂರು ಇಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಗೊಂಡಿವೆ. ವೈದ್ಯಕೀಯ ಪದವಿಯನ್ನೂ ನಾವು ಇಲ್ಲೇ ಪಡೆಯಬಹುದಾಗಿದೆ. ಆದರೆ ನಮ್ಮಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುವ ಇಂಜಿನಿಯರ್ ಕಾಲೇಜುಗಳು ಕೆಲಸಕ್ಕೆಂದು ಮತ್ತೆ ಬೇರಾವುದೋ ದೊಡ್ಡ ಸಿಟಿ ಹುಡುಕಿಕೊಂಡು ಹೋಗಬೇಕಾಗಿರುವ ಪರಿಸ್ಥಿತಿಯಿದೆ. ಈ ಸ್ಥಿತಿ ಬದಲಾಗಬೇಕಿದೆ.

ನಮ್ಮ ಹಾಸನದಲ್ಲಿ ಐಟಿ ಕಂಪನಿಗಳು ಬಂದು ನೆಲೆಸಬೇಕು. ನಮ್ಮ ಹಾಸನ ಕೂಡ ಒಂದು ಮಿನಿ ಐಟಿ ಹಬ್ ಆಗಬೇಕಿದೆ. ಕೇವಲ ಐಟಿ ಮಾತ್ರವಲ್ಲ. ನಮ್ಮಲ್ಲಿ ಬೇರೆ ಎಲ್ಲ ರೀತಿಯ ಉದ್ಯೋಗಾವಕಾಶಗಳೂ ಸೃಷ್ಟಿಯಾಗಬೇಕು. ನಮ್ಮ ಕ್ಷೇತ್ರದಲ್ಲಿ ಯಾವೊಬ್ಬ ಯುವಕ, ಯುವತಿಯೂ ಕೆಲಸ ಸಿಗದೆ ಪರದಾಡುವಂತೆ ಇರಬಾರದು ಎಂದು ಅಭಿಪ್ರಾಯಪಟ್ಟರು.ರೈತರಿಗೆ ಲಾಭವಾಗುವ ಕೆಲಸ ಮಾಡಬೇಕು:

ನಮ್ಮ ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ದುಡಿದು ಬೆಳೆ ಬೆಳೆಯುತ್ತಾರೆ. ನಂತರ ಅದನ್ನು ಯಾವುದೋ ಮಧ್ಯವರ್ತಿಗಳ ಕೈಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ಮಧ್ಯವರ್ತಿಗಳು ಲಾಭ ಪಡೆಯುತ್ತಾರೆಯೇ ಹೊರತು ರೈತರು ಲಾಭ ಪಡೆಯುವುದಿಲ್ಲ. ರೈತರು ಬೆಳೆಯುವ ಬೆಳೆಯನ್ನೇ ಅವರು ಬೇರೆ ಬೇರೆ ಉತ್ಪನ್ನಗಳಾಗಿಸಿ ಅದರಿಂದ ಸಾಕಷ್ಟು ಲಾಭ ಪಡೆಯುತ್ತಾರೆ. ಆದರೆ ಆ ಕಲಸ ನಮ್ಮಲ್ಲೇ ಆಗಬೇಕು. ದೂರದ ಊರಿಗೆ ನಾವು ಬೆಳೆದ ಬೆಳೆ ಕಳುಹಿಸಿ ಕೊನೆಗೆ ಅದನ್ನೇ ಬೇರೆ ಉತ್ಪನ್ನದ ರೂಪದಲ್ಲಿ ದುಬಾರಿ ಬೆಲೆಗೆ ಕೊಂಡುಕೊಳ್ಳುವಂತಿರಬಾರದು. ಮೊದಲು ನಮ್ಮ ಹಾಸನ ಭ್ರಷ್ಟಾಚಾರ ಮುಕ್ತವಾಗಬೇಕು. ನಂತರ ನಮ್ಮ ರಾಜ್ಯ, ನಂತರ ನಮ್ಮ ದೇಶ. ಹೀಗೆ ಪ್ರತಿ ಕ್ಷೇತ್ರವೂ ಭ್ರಷ್ಟಾಚಾರ ಮುಕ್ತವಾಗಬೇಕು. ಅದರತ್ತ ಕೆಲಸ ಮಾಡುವುದಕ್ಕೆ ನಾನು ಭದ್ಧವಾಗಿದ್ದೇನೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕ ರಂಗನಾಥ್, ಕಾಳೇಗೌಡ, ಗೋವಿಂದೇಗೌಡ, ಮೋಹನ್ ರಾಜ್ ಇತರರು ಉಪಸ್ಥಿತರಿದ್ದರು.

Share this article