ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 46ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರವು ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ತೋಟಗಾರಿಕೆ ಸಸಿಗಳ ಉತ್ಪಾದನೆ, ಮುಂಚೂಣಿ ಪ್ರಾತ್ಯಕ್ಷಿಕೆಗಳು, ತರಬೇತಿ ಮುಂತಾದ ಚಟುವಟಿಗಳನ್ನು ಆಯೋಜಿಸುತ್ತಿದ್ದು ರೈತರ ಅವುಗಳ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಜಿಲ್ಲೆಯಲ್ಲಿ ಸಿರಿಧಾನ್ಯ ಬೇಸಾಯ ಹಾಗೂ ಕೃಷಿಯಲ್ಲಿ ಜೈವಿಕ ಗೊಬ್ಬರ/ಪೀಡೆನಾಶಕಗಳ ಬಳಕೆಯನ್ನು ಉತ್ತೇಜಿಸುವ ಅಗತ್ಯವಿದೆ. ನೀರು ಮತ್ತು ಮಣ್ಣು ಸಂರಕ್ಷಣೆ ಕುರಿತು ಅಭಿಯಾನ ಮಾಡಬೇಕು ಹಾಗೂ ರೈತ ಉತ್ಪಾದಕ ಸಂಘ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಮೇಳವನ್ನು ಆಯೋಜಿಸಬಹುದು ಎಂದರು.
ಬೆಂಗಳೂರಿನ ಅಟಾರಿ ಪ್ರಧಾನ ವಿಜ್ಞಾನಿ ಡಾ. ಡಿ.ವಿ.ಎಸ್. ರೆಡ್ಡಿ ಮಾತನಾಡಿ, ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಮತ್ತು ರಸಮೇವು ಉತ್ಪಾದನೆ ಪ್ರಾತ್ಯಕ್ಷಿಕೆ ಘಟಕಗಳನ್ನು ಸ್ಥಾಪಿಸುವುದು ಹಾಗೂ ಕೇಂದ್ರವು ಹಮ್ಮಿಕೊಂಡ ನವೀನ ಕೃಷಿ ತಾಂತ್ರಿಕೆಗಳ ಪ್ರಾತ್ಯಕ್ಷಿಕೆಗಳನ್ನು ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ರೈತ ಸಮುದಾಯಕ್ಕೆ ಪರಿಚಯ ಮಾಡಬೇಕೆಂದು ತಿಳಿಸಿದರು.ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಮಾತನಾಡಿ, ಮಿಶ್ರ ಮೇವು ಉತ್ಪಾದನೆ, ಅಂತರ ಬೆಳೆ, ಹನಿ ನೀರಾವರಿ ಮತ್ತು ಗೋಡಂಬಿಯಲ್ಲಿ ಹೊಸ ತಳಿಯನ್ನು ಜನಪ್ರಿಯಗೊಳಿಸುವ ಕುರಿತು ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳುವ ಹಾಗೂ ಅಲ್ಪಾವಧಿಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಸ್ಥಳೀಯ ಪ್ರಗತಿಪರ ರೈತರು ಹಾಗೂ ಸಮಿತಿ ಸದಸ್ಯರಾದ ಪರಮೇಶ್ವರಪ್ಪ ಹಲಗೇರಿ ಮತ್ತು ಚಂದ್ರಕಾಂತ ಸಂಗೂರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಜಿಲ್ಲೆಯ ವೈವಿಧ್ಯಮಯ ಬೆಳೆ ಪ್ರಾತ್ಯಕ್ಷಿಕೆಗಳನ್ನು ಹಾಗೂ ತಾಂತ್ರಿಕ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಉಪಸ್ಥಿತರಿದ್ದು ಸಂದರ್ಭಕ್ಕೆ ಅವಶ್ಯವಿದ್ದ ಮಾಹಿತಿಯನ್ನು ಸಭೆಗೆ ನೀಡಿ ಸಮಿತಿ ಸದಸ್ಯರಿಂದ ಇನ್ನೂ ಹೆಚ್ಚಿನ ಸಲಹೆಗಳನ್ನು ಪಡೆದರು.