ಕನ್ನಡಪ್ರಭ ವಾರ್ತೆ ಗೋಕಾಕ
ರೈತ ದೇಶದ ಬೆನ್ನೆಲುಬು ದೇಶದಲ್ಲಿ ರೈತರು, ಸೈನಿಕರು ಮತ್ತು ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಆದಿಕವಿ ರನ್ನ ಹೇಳಿದಂತೆ ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಈ ಜಗವೆಲ್ಲ. ಅಂದರೆ ಅನ್ನದಾತ ಬೆಳೆ ಬೆಳೆಯದಿದ್ದರೆ, ಈ ಭೂಮಿಯ ಮೇಲೆ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಜಗತ್ತಿನಲ್ಲಿ ನಾವೆಲ್ಲರೂ ಬೆಳೆಯನ್ನು ಬೆಳೆಯುವ ರೈತರಿಗೆ ಎಲ್ಲರು ಹೆಚ್ಚಿನ ಮಹತ್ವ ಮತ್ತು ಗೌರವ ನೀಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದ ತಮ್ಮ ಗೃಹಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳಾದ ನೇಗಿಲು, ರೋಟವೇಟರ್, ಪವರ್ ಟಿಲ್ಲರ್, ರವದಿ ಕಟಾವು ಯಂತ್ರ ಇತ್ಯಾದಿಗಳನ್ನು ರೈತ ಫಲಾನುಭವಿಗಳಿಗೆ ಶನಿವಾರ ವಿತರಣೆ ಮಾಡಿ ಅವರು ಮಾತನಾಡಿದರು.
ರೈತರು ಕೃಷಿ ಯಂತ್ರೋಪಕರಣಗಳನ್ನು ಉಪಯೋಗ ಮಾಡಿಕೊಂಡು ಹಾಗೂ ಕೃಷಿ ಅಧಿಕಾರಿಗಳ ತಾಂತ್ರಿಕ ಸಲಹೆಗಳನ್ನು ಪಡೆದು ಹೊಸ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿ ಹೆಚ್ಚಿನ ಇಳುವರಿ ತೆಗೆದು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕೃಷಿ ಕೂಲಿ ಕಾರ್ಮಿಕರು ಕೃಷಿ ಕೆಲಸಕ್ಕೆ ಸಿಗದೇ ಇರುವುದರಿಂದ ರೈತರು ಕೃಷಿ ಕಸಬು ಮಾಡುವುದು ತುಂಬಾ ಕಷ್ಟಮಯವಾಗಿದ್ದು, ಕೃಷಿ ಯಂತ್ರೋಪಕರಣಗಳನ್ನು ಉಪಯೋಗ ಮಾಡುವುದು ಅನಿವಾರ್ಯವಾಗಿರುತ್ತದೆ. ತಾಲೂಕಿನ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸದಾ ಸಿದ್ಧನಿರುತ್ತನೆ ಎಂದು ಶಾಸಕರು ತಿಳಿಸಿದರು.ಕೃಷಿ ಇಲಾಖೆಯ ಮಾನ್ಯ ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕುಗಳು ಶೇ.100ರಷ್ಟು ನೀರಾವರಿ ಪ್ರದೇಶ ಇರುವುದರಿಂದ ಹೆಚ್ಚು ಕಬ್ಬು, ಗೋವಿನ ಜೋಳ ಮತ್ತು ಅರಿಶಿನ ಬೆಳೆಗಳನ್ನು ಬೆಳೆಯಲಾಗುತ್ತದೆ. ಉಬಯ ತಾಲೂಕುಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಶೇ.98ರಷ್ಟು ಬಿತ್ತನೆಯಾಗಿದ್ದು, ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇರುವುದಿಲ್ಲ ಎಂದರು. ಮುಂದಿನ ದಿನಗಳಲ್ಲಿ ಯೂರಿಯಾ ರಸಗೊಬ್ಬರ ಪೂರೈಕೆಯಲ್ಲಿ ಶೇ.50 ಕಡಿಮೆ ಮಾಡಲಾಗುವುದು ಎಂದು ಮಾನ್ಯ ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಉಪಯೋಗ ಮಾಡುವುದರಿಂದ ಭೂಮಿ ಆರೋಗ್ಯ ಹಾಗೂ ಫಲವತ್ತತೆ ಹಾಳಾಗಿ ಭೂಮಿಯು ಬರಡವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಲ್ಲದೆ ಮಾನವನ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕ್ಯಾನ್ಸರ್ ಹಾಗೂ ಟಿಬಿಯಂತ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಆದ್ದರಿಂದ ರೈತರು ಯೂರಿಯಾ ಉಪಯೋಗ ಮಾಡುವ ಬದಲಿಗೆ ಕಾಂಪ್ಲೆಕ್ಸ್ ರಸಗೊಬ್ಬರಗಳಾದ 10:26:26, 19:19:19, 12:32:16, 20:20:0:13 ಹಾಗೂ ದ್ರವರೂಪದ ನ್ಯಾನೋ ಯೂರಿಯಾ ಉಪಯೋಗ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ.ಆರ್.ಕಾಗಲ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೊಲೀಸಗೌಡರ, ಸುರೇಶ್ ಸನದಿ, ಅಶೋಕ ಗೋಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಂ.ನದಾಫ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ರೈತ ಫಲಾನುಭವಿಗಳು ಹಾಜರಿದ್ದರು.