- ಕಾಂಗ್ರೆಸ್ ಹೈಕಮಾಂಡ್ ದಲಿತರಿಗೆ ಅವಕಾಶ ನೀಡಲಿ: ಎನ್.ರುದ್ರಮುನಿ । ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ: ಶೇಖರಪ್ಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ದಲಿತ ನಾಯಕರಾದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಛಲವಾದಿ ಮಹಾಸಭಾ ಜಿಲ್ಲಾ ಘಟಕ ತಾಕೀತು ಮಾಡಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಅವರು, ಸಿಎಂ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಮುಂದಾದರೆ, ತಳ ಸಮುದಾಯದ ನಾಯಕ, ಕಾಂಗ್ರೆಸ್ ನಿಷ್ಠಾವಂತ ನಾಯಕ ಡಾ.ಪರಮೇಶ್ವರಗೆ ಸಿಎಂ ಸ್ಥಾನ ನೀಡಬೇಕು ಎಂದರು.ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಒಂದುವೇಳೆ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ದಲಿತ ಸಮುದಾಯಕ್ಕೆ ಹೈಕಮಾಂಡ್ ಅವಕಾಶ ನೀಡಬೇಕು. ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಕಾಂಗ್ರೆಸ್ ನಾಯಕತ್ವ ವಹಿಸಿ, ಪಕ್ಷವನ್ನು ಅಧಿಕಾರಕ್ಕೆ ತರಲು ಡಾ.ಪರಮೇಶ್ವರ ಶ್ರಮಿಸಿದ್ದಾರೆ. ಅವರ ಸೇವೆಯನ್ನು ಹೈಕಮಾಂಡ್ ಗುರುತಿಸಿ, ಅವಕಾಶ ನೀಡಲಿ ಎಂದರು.
ರಾಜ್ಯದ ಎಲ್ಲ ವರ್ಗದವರ ವಿಶ್ವಾಸ ಗಳಿಸಿರುವ ಡಾ.ಪರಮೇಶ್ವರ ಸೇವೆ ರಾಜ್ಯಕ್ಕೆ ಅಗತ್ಯವಾಗಿದೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ನಡೆ ಏನೆಂಬುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.ದಲಿತ ನಾಯಕರಿಗೆ ನೀಡಿಲ್ಲ:
ಮಹಾಸಭಾ ಗೌರವಾಧ್ಯಕ್ಷ ಎಸ್.ಶೇಖರಪ್ಪ ಮಾತನಾಡಿ, ನಮ್ಮ ತಾಳ್ಮೆಯ ಕಟ್ಟೆಯೂ ಒಡೆದಿದೆ. ದಲಿತ ಸಮುದಾಯಗಳು ಎಚ್ಚೆತ್ತಿದ್ದೇವೆ. ನಾವು ಹಿಂದಿನಿಂದಲೂ ಸಿಎಂ ಆಗುವ ಅವಕಾಶಗಳಿಂದ ವಂಚಿತರಾಗುತ್ತಲೇ ಬಂದಿದ್ದೇವೆ. ಕೆಂಗಲ್ ಹನುಮಂತರಾಯರಿಂದ ಈವರೆಗೆ ಎಲ್ಲ ರಾಜಕೀಯ ಪಕ್ಷಗಳು ಅರ್ಹತೆ, ಅವಕಾಶ ಎಲ್ಲವೂ ಇದ್ದರೂ ದಲಿತ ನಾಯಕರಿಗೆ ಸಿಎಂ ಸ್ಥಾನಮಾನ ನೀಡಿಲ್ಲ. ಈ ಹಿಂದೆ ಬಸವಲಿಂಗಪ್ಪ, ರಂಗನಾಥ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರಗೆ ಅವಕಾಶ ತಪ್ಪಿದ್ದು, ತಪ್ಪಿಸಿದ್ದನ್ನು ನಾವು ಮರೆತಿಲ್ಲ ಎಂದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಜನತಾ ಪರಿವಾರ ಹೀಗೆ ಎಲ್ಲಾ ರಾಜಕೀಯ ಪಕ್ಷಗಳು ಅವಕಾಶ ಇದ್ದರೂ ಸಹ ದಲಿತರಿಗೆ ಸಿಎಂ ಸ್ಥಾನ ನೀಡಲಿಲ್ಲ. ಒಬ್ಬರೇ 2 ಸಲ ಸಿಎಂ ಆಗಿದ್ದಾರೆ. ಅಪ್ಪ-ಮಗ ಸಹ ಸಿಎಂ ಆಗಿದ್ದಾರೆ. ಆದರೆ, ದಲಿತರಿಗೆ ಯಾವೊಂದು ಪಕ್ಷವೂ ಒಂದು ಸಲವೂ ಸಿಎಂ ಆಗುವ ಅವಕಾಶ ಕೊಟ್ಟಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಛಲವಾದಿ ಸಮಾಜವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿದೆ. ನಮ್ಮ ಸಮುದಾಯದ ನಾಯಕರು ಕಳಂಕವಿಲ್ಲದೇ ಪಕ್ಷ ಸೇವೆ ಸಲ್ಲಿಸಿದ್ದರೂ, ಸಿಎಂ ಹುದ್ದೆಯನ್ನು ಯಾಕೆ ನಮ್ಮ ಸಮಾಜಕ್ಕೆ ಕೊಟ್ಟಿಲ್ಲವೆಂಬ ಪ್ರಶ್ನೆ ನಾವು ಕೇಳುತ್ತೇವೆ ಎಂದು ತಿಳಿಸಿದರು.
ತಾಳ್ಮೆಯ ಕಟ್ಟೆ ಒಡೆದಿದೆ:ರಾಜ್ಯದಲ್ಲಿ ಕೇವಲ 40-50 ಲಕ್ಷ ಜನಸಂಖ್ಯೆ ಇದ್ದವರು, ಕೆಲವೇ ಲಕ್ಷ ಸಂಖ್ಯೆಯ ಸಮುದಾಯದವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, 1.5 ಕೋಟಿ ಜನಸಂಖ್ಯೆ ಹೊಂದಿರುವ ದಲಿತರು ಮಾತ್ರ ಇಂದಿಗೂ ಸಿಎಂ ಆಗಿಲ್ಲ. ನಮ್ಮ ತಾಳ್ಮೆಯ ಕಟ್ಟೆಯೂ ಒಡೆದಿದೆ. ಇನ್ನು ಸುಮ್ಮನಿರುವುದಕ್ಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್‌ಗೆ ಛಲವಾದಿ ಸಮಾಜದ ಡಾ.ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸುತ್ತೇವೆ. ಬೇಡಿಕೆಗೆ ಸ್ಪಂದಿಸದಿದ್ದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠವನ್ನೇ ದಲಿತ ಸಮುದಾಯಗಳು ಕಲಿಸಲಿವೆ ಎಂದು ಎಚ್ಚರಿಕೆ ನೀಡಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎ.ಡಿ. ಕೊಟ್ರಬಸಪ್ಪ, ಟಿ.ಎಸ್.ರಾಮಪ್ಪ, ಸಾರಥಿ ಬಸವರಾಜ, ಎಂ.ಸಿ. ಓಂಕಾರಪ್ಪ, ಜಯಂತ್, ಬಸವಂತಪ್ಪ ಇತರರು ಇದ್ದರು.- - -
(ಬಾಕ್ಸ್) * ಖರ್ಗೆ, ಜಾರಕಿಹೊಳಿಗಾದರೂ ಸಿಎಂ ಮಾಡಲಿಪರಿಶಿಷ್ಟರಿಗೆ ಈವರೆಗೆ ಸಿಎಂ ಸ್ಥಾನ ನೀಡಿಲ್ಲ. ಡಾ.ಜಿ.ಪರಮೇಶ್ವರಗೆ ಸಿಎಂ ಸ್ಥಾನ ನೀಡಲಿ. ಇಲ್ಲದೇ ಮಲ್ಲಿಕಾರ್ಜುನ ಖರ್ಗೆ, ಸತೀಶ ಜಾರಕಿಹೊಳಿ ಪೈಕಿ ಯಾರಿಗಾದರೂ ಸಿಎಂ ಮಾಡಲಿ. ಸಮ ಸಮಾಜ, ಸಾಮಾಜಿಕ ನ್ಯಾಯ, ಸಾಂವಿಧಾನಿಕ ಹಕ್ಕು ಎಲ್ಲಿವೆ? ಈವರೆಗೆ ಯಾಕೆ ದಲಿತರಿಗೆ ಸಿಎಂ ಸ್ಥಾನ ನೀಡಿಲ್ಲವೆಂಬುದನ್ನೂ ಕಾಂಗ್ರೆಸ್ ಬಹಿರಂಗಪಡಿಸಲಿ. ಸ್ವಾಮೀಜಿಗಳು ತಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಕೇಳುತ್ತಾರೆ. ಆದರೆ, ದಲಿತರಿಗೆ ಆದ ಅನ್ಯಾಯ ಸರಿಪಡಿಸಲು, ಡಾ.ಪರಮೇಶ್ವರಗೆ ಸಿಎಂ ಸ್ಥಾನ ನೀಡಬೇಕೆಂದು ಛಲವಾದಿ ಮಹಾಸಭಾ ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂದು ಶೇಖರಪ್ಪ ಹೇಳಿದರು.
- - -
-3ಕೆಡಿವಿಜಿ1:ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಎಸ್.ಶೇಖರಪ್ಪ, ಅಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.