ಹೊಸಪೇಟೆ: ಸರ್ಕಾರಗಳು ಯುವಜನರ ಕೈಗೆ ಕಾಯಂ ಉದ್ಯೋಗ ನೀಡುವ ಬದಲು ಖಾಸಗೀಕರಣಕ್ಕೆ ಮುಂದಾಗಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವ ಹಕ್ಕನ್ನು ಯುವಜನರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯ ಎ.ಎ. ರಹೀಂ ಹೇಳಿದರು.
ನಗರದ ಉಮರ್ ಪಂಕ್ಷನ್ ಹಾಲ್‌ನಲ್ಲಿ ಶನಿವಾರ ನಡೆದ ಡಿವೈಎಫ್‌ಐನ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಬದಲು ಬಂಡವಾಳದಾರರಿಗೆ ಮಣೆ ಹಾಕುತಿವೆ. ಸರ್ಕಾರಗಳು ಈ ಚಾಳಿಯನ್ನು ಕೈಬಿಡಬೇಕು. ಯುವಕರಿಗೆ ಉದ್ಯೋಗ ದೊರೆಯದಿದ್ದರೆ ಬಡವರ ಬದುಕು ಹಸನಾಗುವುದಿಲ್ಲ. ಈಗಾಗಲೇ ಸಾಲ ಮಾಡಿ ಮಕ್ಕಳನ್ನು ಓದಿಸಲಾಗುತ್ತಿದೆ. ಬಡ, ಮಧ್ಯಮ ವರ್ಗಗಳ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ಇಂತಹದರಲ್ಲಿ ಯುವಕರಿಗೆ ಉದ್ಯೋಗ ನೀಡದೆ, ಬರೀ ಧರ್ಮದ ನಶೆ ಏರಿಸಿದರೆ ದೇಶ ಗಟ್ಟಿಯಾಗುವುದಿಲ್ಲ. ನಾವು ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶವನ್ನು ಕಟ್ಟಬೇಕಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವುಗಳಿಂದ ಹೊರ ಬರಬೇಕು. ಈ ದೇಶದ ಯುವಜನರ ಹಿತ ಕಾಪಾಡುವ ಕೆಲಸ ಮಾಡಬೇಕು. ದೇಶದ ಭವಿಷ್ಯದ ದೃಷ್ಟಿಕೋನದೊಂದಿಗೆ ಯುವಕರಿಗೆ ಉದ್ಯೋಗ ಒದಗಿಸಬೇಕು ಎಂದು ಹೇಳಿದರು.ಡಿವೈಎಫ್‌ಐ ಸಂಘಟನೆ ಯುವಜನತೆಯಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ಜಾಗೃತಗೊಳಿಸುತ್ತಿದೆ. ಜಾತ್ಯತೀತ ಮೌಲ್ಯಗಳನ್ನು ಬಿತ್ತುತ್ತಿದೆ. ಈ ದೇಶದ ಯುವಜನರ ಪರ ಧ್ವನಿ ಎತ್ತುತ್ತಿದೆ. ಸವಾಲುಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಿದೆ. ಈ ಕಾರ್ಯವನ್ನು ಇಡೀ ದೇಶಾದ್ಯಂತ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದರು.
ಜಿಂದಾಲ್‌ನಂತಹ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಜಮೀನನ್ನು ಅಗ್ಗದ ದರದಲ್ಲಿ ನೀಡುವ ಪ್ರಮೇಯ ನಿಲ್ಲಬೇಕು. ಖಾಸಗಿ ಕಂಪನಿಗಳನ್ನು ಸರ್ಕಾರಗಳು ಉದ್ಧಾರ ಮಾಡಬಾರದು. ರಾಜ್ಯ ಸರ್ಕಾರ ಜಿಂದಾಲ್‌ಗೆ ಸರ್ಕಾರಿ ಜಮೀನು ನೀಡುವ ನಿರ್ಧಾರವನ್ನು ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಕಾರ್ಯದರ್ಶಿ ಬಸವರಾಜ್ ಪೂಜಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಮುಖಂಡರಾದ ವಿ. ಸ್ವಾಮಿ, ಬಂಡೆ ತಿರುಕಪ್ಪ, ವೆಂಕಟೇಶ್, ಸಂತೋಷ್ ಮತ್ತಿತರರಿದ್ದರು.