ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಗ್ರಾಮೀಣರಿಗೆ ಆದ್ಯತೆ ನೀಡಿ: ಕರೀಂ ಅಸದಿ

KannadaprabhaNewsNetwork | Published : Feb 1, 2025 12:00 AM

ಸಾರಾಂಶ

ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳನ್ನು ಪ್ರತಿನಿಧಿಸಿ ಸಂಘದ ಸದಸ್ಯರು ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಬಂದಾಗ ವಿನಾಕಾರಣ ಅವರನ್ನು ಮರಳಿ ಕಳುಹಿಸದೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ ತಿಳಿಸಿದರು.

ಕಾರವಾರ: ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‌ಬಿವೈ)ಗಳಿಗೆ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮೀಣ ಭಾಗದ ಜನರು ನೋಂದಾಯಿಸಿಕೊಳ್ಳಲು ಬ್ಯಾಂಕ್‌ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ ತಿಳಿಸಿದರು.ಆಯೋಜಿಸಿದ್ದ ಇಲ್ಲಿನ ಜಿಪಂ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ) ಮತ್ತು ಜಿಪಂ ಸಹಯೋಗದೊಂದಿಗೆ ಶುಕ್ರವಾರ ಒಂದು ದಿನದ ಬ್ಯಾಂಕ್‌ರ್ಸ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಅನಿರೀಕ್ಷಿತ ಅಪಘಾತಗಳು, ಪ್ರಾಣಹಾನಿ, ಶಾಶ್ವತ ಅಂಗ ವೈಫಲ್ಯದ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಪ್ರಾಥಮಿಕ ಆರ್ಥಿಕ ಭದ್ರತೆ ಒದಗಿಸುವಲ್ಲಿ ಸದರಿ ಯೋಜನೆಗಳು ತುಂಬಾ ಸಹಕಾರಿಯಾಗಿವೆ. ಗ್ರಾಮೀಣ ಮಟ್ಟದಲ್ಲಿ ಸ್ವ ಸಹಾಯ ಗುಂಪುಗಳನ್ನು ಪ್ರತಿನಿಧಿಸಿ ಸಂಘದ ಸದಸ್ಯರು ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಬಂದಾಗ ವಿನಾಕಾರಣ ಅವರನ್ನು ಮರಳಿ ಕಳುಹಿಸದೆ ಅಗತ್ಯ ಸಹಕಾರ ನೀಡಬೇಕು ಎಂದರು.

ಯೋಜನೆಯಡಿ ಎಲ್ಲರನ್ನೂ ಒಳಪಡಿಸಲು ನಮ್ಮೊಂದಿಗೆ ಕೈಜೋಡಿಸುವಂತೆ ತಿಳಿಸುತ್ತಾ, ಮಹಿಳಾ ಸ್ವ ಸಹಾಯ ಗುಂಪುಗಳು ಪ್ರಾರಂಭಿಸುವ ಕಿರು ಉದ್ದಿಮೆಗಳಿಗೆ ಸುಲಭ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‌ಗಳ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ವಿವರಿಸಿದರು.ಎನ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ರೆಡ್ಡಿ, ಮಹಿಳಾ ಸ್ವ ಸಹಾಯ ಗುಂಪಿನ ಹಣಕಾಸು ಸಾಕ್ಷರತೆ, ಜೀವನೋಪಾಯ ಚಟುವಟಿಕೆಗಳಿಗೆ ಬ್ಯಾಂಕ್ ಸಾಲ ನೀಡುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ, ಡಿಜಿಟಲ್ ಸಾಕ್ಷರತೆ, ಮಹಿಳಾ ಸಬಲೀಕರಣ, ಆನ್‌ಲೈನ್ ಮೂಲಕ ಸಾಲ ನೀಡುವಿಕೆ ಮತ್ತು ಆರ್ಥಿಕ ಸೇರ್ಪಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು.ಸಹಾಯಕ ಯೋಜನಾಧಿಕಾರಿ ಕೃಷ್ಣ ಶಾಸ್ತ್ರಿ ಹಾಗೂ ಕರಾವಳಿ ಭಾಗದ ತಾಲೂಕುಗಳ ಬ್ಯಾಂಕ್ ಮ್ಯಾನೇಜರ್ಸ್, ಎನ್ಆರ್‌ಎಲ್ಎಂ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿ ಇದ್ದರು.ಕಂದಾಯ ಇಲಾಖೆ ನೌಕರರಿಂದ ಪ್ರತಿಭಟನೆ

ಹೊನ್ನಾವರ: ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಫೆ. ೩ರಿಂದ ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳು ಎಲ್ಲ ಬಗ್ಗೆಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ನೀಡಿದರು. ಈ ವೇಳೆ ಸಂಘದ ತಾಲೂಕಾಧ್ಯಕ್ಷೆ ವೈಭವಿ ಗೌಡ, ಸುನೀಲಕುಮಾರ, ಮಹೇಂದ್ರ ಗೌಡ, ಸುಪ್ರಿಯಾ ಆಚಾರಿ ಇತರರು ಇದ್ದರು.

Share this article