ಮಕ್ಕಳಿಗೆ ಸಂಸ್ಕಾರ ನೀಡಿ

KannadaprabhaNewsNetwork |  
Published : Oct 28, 2023, 01:16 AM IST
೨೭ಎಚ್‌ವಿಆರ್೧ | Kannada Prabha

ಸಾರಾಂಶ

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕೊಡಿ. ಅಂದಾಗ ಮಾತ್ರ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕು ಕನಕ ನೌಕರರ ಸಂಘವು ಭಕ್ತ ಶ್ರೇಷ್ಠ ಕನಕದಾಸರ ೫೩೬ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾವೇರಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕೊಡಿ. ಅಂದಾಗ ಮಾತ್ರ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕು ಕನಕ ನೌಕರರ ಸಂಘವು ಭಕ್ತ ಶ್ರೇಷ್ಠ ಕನಕದಾಸರ ೫೩೬ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳನ್ನು ಕೇವಲ ಹೆಚ್ಚು ಅಂಕಗಳನ್ನು ಪಡೆಯಲು ಒತ್ತಾಯಿಸುವುದು ಸರಿಯಲ್ಲ. ಮಕ್ಕಳನ್ನು ಒಳ್ಳೆಯ ಸಂಸ್ಕಾರವಂತರನ್ನಾಗಿ ಬೆಳೆಸಿದಾಗ ಮಾತ್ರ ಅವರ ಬದುಕಿಗೊಂದು ದಾರಿ ಸಿಗಲು ಸಾಧ್ಯ. ಸಮುದಾಯ ಸಂಘಟನಾತ್ಮಕ ಚಟುವಟಿಕೆಯೊಂದಿಗೆ ಸಂಘಟಿತರಾಗಿ ಶೈಕ್ಷಣಿಕ ಜಾಗೃತಿ ಮೂಡಿಸಬೇಕು. ಈಗಾಗಲೆ ಕಾಗಿನೆಲೆ ಕನಕ ಗುರು ಪೀಠವು ಕುರುಬ ಸಮುದಾಯದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸುತ್ತ ಸಾಗಿದೆ. ರಾಜ್ಯದ ಹಲವೆಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದು, ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲಾ ಕೇಂದ್ರ ಸ್ಥಳದಲ್ಲಿ ಶ್ರೀಮಠದ ೨೦ ಗುಂಟೆಯ ನಿವೇಶದಲ್ಲಿ ವಸತಿ ನಿಲಯ ಮತ್ತು ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ, ಕಳೆದ ಹಲವು ವರ್ಷಗಳಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಾ ಬಂದಿರುವ ತಾಲೂಕು ಕನಕ ನೌಕರರ ಸಂಘ ಕುರುಬ ಸಮುದಾಯದಲ್ಲಿ ಶಿಕ್ಷಣದ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಕೊಡುಗೆಯಾಗಿದೆ. ಆದರೆ ಸರ್ಕಾರಿ ನೌಕರರು ಕೇವಲ ನಿಮ್ಮ, ನಿಮ್ಮ ಮಕ್ಕಳಿಗೆ ಮಾತ್ರ ಶಿಕ್ಷಣ ಕೊಡಿಸಿದರೆ ಸಾಲದು, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ರೈತರಾಗಿ, ಕೂಲಿಕಾರ್ಮಿಕರಾಗಿಯೆ ದುಡಿಯುತ್ತಿರುವ ನಿಮ್ಮ ಸಹೋದರರ ಮತ್ತು ಸಂಬಂಧಿಕರ ಮಕ್ಕಳಿಗೂ ಸಹಾಯ ಮಾಡಿದಾಗ ಮಾತ್ರ ಕುರುಬ ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಹಿಂದುಳಿದ ಕುರುಬ ಸಮುದಾಯಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಭದ್ರತೆ ಸಿಗಬೇಕಾದರೆ ನಮಗೂ ಎಸ್‌ಟಿ ಮೀಸಲಾತಿ ಸಿಗಬೇಕು. ಈ ದಿಸೆಯತ್ತ ಶ್ರೀ ಮಠದ ಜಗದ್ಗುರುಗಳು ನಿರಂತರವಾಗಿ ವಿವಿಧ ಹಂತದಲ್ಲಿ ಹೋರಾಟ ನಡೆಸಿದ್ದು ಸಮುದಾಯವು ಕೂಡಾ ಶ್ರೀಗಳ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದರು.

ಕಾಗಿನೆಲೆ ಕನಕ ಗುರು ಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡರ, ಚರ್ಮರೋಗ ತಜ್ಞ ಡಾ. ರಾಘವೇಂದ್ರ ಜಿಗಳಿಕೊಪ್ಪ ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಶ್ರೀಕನಕ ನೌಕರರ ಸಂಘದ ಅಧ್ಯಕ್ಷ ಕೆ.ವೈ. ಪಿಡ್ಡಿ ವಹಿಸಿದ್ದರು, ಉಪವಿಭಾಗಾಧಿಕಾರಿ ಚನ್ನಪ್ಪ ಎಚ್.ಬಿ,, ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಅಶೋಕ ಭೀಮನಹಳ್ಳಿ, ನಿವೃತ್ತ ಸಹಾಯಕ ಅಭಿಯಂತರ ಕೆ.ಎಚ್. ಉದಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ, ತಾಲೂಕು ಕುರುಬರ ಸಂಘದ ಅಧ್ಯಕ್ಷ ನಿಂಗಪ್ಪ ತುಕ್ಕಣ್ಣನವರ, ಹೇಮಂತ ಗಂಟೆರ, ರಾಜ್ಯ ಕುರುಬರ ಸಂಘದ ನಿರ್ದೇಶಕಿ ಸುಜಾತ ಹಾಲಸಿದ್ದಪ್ಪನವರ, ಸಮಾಜದ ಮುಖಂಡರಾದ ಮಾಲತೇಶ ಬಣಕಾರ, ಹನುಮಂತಗೌಡ ಗಾಜಿಗೌಡರ ಇದ್ದರು.

ಸಂಘದ ಗೌರವಾಧ್ಯಕ್ಷ ಎಸ್.ಎನ್. ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕಾಕೋಳ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ