ಕನ್ನಡಪ್ರಭ ವಾರ್ತೆ ಕಾಗವಾಡ
ತಮ್ಮ ಪ್ರಮುಖ ಬೇಡಿಕೆ ಈಡೇರದೆ ಹೊದರೇ ಸಕ್ಕರೆ ಕಾರ್ಖಾನೆಯ ಕ್ಯಾರೀಯರ್‌ನಲ್ಲಿ ಒಂದು ತುಂಡು ಕಬ್ಬು ಬೀಳುವುದಿಲ್ಲ, ನಿಮ್ಮ ಚಿಮಣಿಯಿಂದ ಹೊಗೆಯು ಸಹ ಬರುವುದಿಲ್ಲ ಎಂದು ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಬುಧವಾರ ರೈತ ಸಂಘಟನೆಯ ಮುಖಂಡರು ರಾಜ್ಯ ಹೆದ್ದಾರಿ ತಡೆದು ಮೋಳೆ, ಮಂಗಸೂಳಿ, ಐನಾಪೂರ, ಕೆಂಪವಾಡ, ಲೋಕೂರ, ಕಿತ್ತೂರ, ಬಣಜವಾಡ ಕೌಲಗುಡ್ಡ, ನವಲಿಹಾಳ ಸೇರಿದಂತೆ ಹಲವಾರು ಗ್ರಾಮಗಳ ನೂರಾರು ರೈತರು ಪ್ರತಿಭಟನೆ ನಡೆಸಿ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದರು.ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ ಪಕ್ಷ ₹3.500 ಘೋಷಿಸಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಕಳೆದ ಒಂದು ವಾರದಿಂದ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಲಕ್ಷಾಂತರ ರೈತರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಯಾವೊಬ್ಬ ಸಚಿವರಾಗಲಿ, ಶಾಸಕರಾಗಲಿ, ಕಾರ್ಖಾನೆಯ ಮಾಲಿಕರಾಗಲಿ ಬಂದು ದರ ಘೋಷಣೆ ಮಾಡದೆ ಇರುವುದು ರೈತರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಹೀಗೆ ನೀವು ಮೊಂಡುತನ ಮುಂದುವರೆಸಿದರೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ರೈತರು ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಈಗ ಅಕ್ಷರಶಃ ರೈತರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಕಾರ್ಖಾನೆಯವರು ಕುತಂತ್ರಗಳನ್ನು ನಡೆಸುತ್ತಿದ್ದಾರೆಂದು ಮಾಜಿ ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡ ಚಿದಾನಂದ ಮಾಳಿ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ದರ ₹4500 ಇರುವಾಗ ಕಬ್ಬಿಗೆ ₹3500 ನೀಡಬೇಕು ಎಂದು ಆಗ್ರಹಿಸಿ, ಕಬ್ಬಿನಿಂದ ಸಕ್ಕರೆ ಅಲ್ಲದೆ ಉಪ ಉತ್ಪನ್ನಗಳಿಂದ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಳ್ಳುತ್ತಿದ್ದರೂ ಸಹ ರೈತರಿಗೆ ಮಾತ್ರ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಈ ವೇಳೆ ರೈತ ಮುಖಂಡರಾದ ನಾನಾಸಾಹೇಬ ಶಿರಗಾಂವೆ, ರಾಹುಲ್ ಕಟಗೇರಿ, ವೀರಭದ್ರ ಕಟಗೇರಿ, ಸಂಜಯ ತಳವಲಕರ, ಚಿದಾನಂದ ಮಾಳಿ, ಮುಕುಂದ ಪೂಜಾರಿ, ಸಿದ್ದು ಹವಳೆ, ಆಧಿನಾಥ ಯರಂಡೋಲಿ, ಅಶೋಕ ಹುಗ್ಗಿ, ಮಹಾವೀರ ಮುಂಜೆ, ಬಾಹುಬಲಿ ಟೋಪಗಿ, ದುಂಡಪ್ಪ ತುಗಶೆಟ್ಟಿ, ಬಾಳು ನರಟ್ಟಿ, ಪೋಪಟ ಬಣಚೋಡ, ಗಣಪತಿ ಬಣಚೋಡ, ರವೀಂದ್ರ ಬಣಚೋಡ, ಅಶೋಕ ಚಾಳೇಕರ, ಹಣಮಂತ ಕಡಕೋಳ, ಧರೆಪ್ಪ ಕೆಂಪವಾಡೆ, ಶಾಂತು ದೇಸಾಯಿ, ಲಕ್ಷ್ಮಣ ಮಾಳಿ ಸೇರಿದಂತೆ ನೂರಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮಂಗಸೂಳಿ ಗ್ರಾಮದಲ್ಲಿ ರಾಜ್ಯ ಹೆಚ್ಚಾರಿಯನ್ನು ಬಂದ್ ಮಾಡು ಸುಮಾರು 4 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಪಾಗವಾಡ ಒಲಿಸರು ಬಂದೋಬಸ್ತ ಏರ್ಪಡಿಸಿ ರೈತರಿಗೆ ಸಾಥ್ ನೀಡಿದರು. ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರು ಬಂದು ರೈತರ ಮನವಿ ಸೀಕರಿಸಿ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು. ಬೆಂಬಲ, ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಗವಾಡ ತಾಲೂಕು ವಕೀಲರ ಸಂಘ ಹಾಗೂ ಪತ್ರಕರ್ತರು ತಮ್ಮ ಬೆಂಬಲ ಸೂಚಿಸಿದರು.