ಹೂವಿನಹಡಗಲಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಭಾರತೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಮತ್ತು ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಎಐಟಿಯುಸಿಯ ಸುರೇಶ ಹಲಗಿ ಮಾತನಾಡಿ, ಯಡ್ರಾಮಿ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ ಅತ್ಯಾಚಾರ ಎಸಗಿರುವುದನ್ನು ಖಂಡಿಸುತ್ತೇವೆ. ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವನ್ನು ನೀಡಿದ್ದು, ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧಕರಿದ್ದಾರೆ. ಆದರೆ, ಮಹಿಳೆಯರ, ಬಾಲಕಿಯರ ಮೇಲೆ ಪದೇ ಪದೇ ಅತ್ಯಾಚಾರ, ಹಲ್ಲೆ ನಡೆಯುತ್ತಿರುವುದು ತೀವ್ರ ನೋವಿನ ಸಂಗತಿ. ಕೃತ್ಯ ಎಸಗಿದ ಆರೋಪಿ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಿ, ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಕೂಡಲೇ ರಾಜ್ಯದಲ್ಲಿ ಇರುವ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಬಿ. ಜಯಲಕ್ಷ್ಮೀ ಮಾತನಾಡಿ, ಖಾಸಗಿ ಶಾಲೆಯ ಕಾಮುಕ ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡುವ ಜತೆಗೆ, ಸರ್ಕಾರ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಹೇಳಿದರುಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಗೌರವಾಧ್ಯಕ್ಷ ನಿವೃತ್ತ ಶಿಕ್ಷಕ ಎಸ್. ನಾಗರಾಜಪ್ಪ, ತಾಲೂಕು ಅಧ್ಯಕ್ಷ ವಿ. ಜಯನಾಯ್ಕ, ವಿದ್ಯಾರ್ಥಿ ಫೆಡರೇಷನ್ನಿ ತೋಟಯ್ಯ, ಮಂಜುಳಾ, ಮೀನಾಕ್ಷಿ, ಚೆನ್ನಮ್ಮ, ಮಧು, ತನುಜಾ, ಅನುಷ, ರಾಕೇಶ್ ಪ್ರಜ್ವಲ್ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ತಹಸೀಲ್ದಾರ್ ಜಿ.ಸಂತೋಷಕುಮಾರ್ ಅವರಿಗೆ ಮನವಿ ಸಲ್ಲಿಸಿದರು.