ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಿ. ರಾಮು ಆಗ್ರಹ
2023-24ನೇ ಸಾಲಿನಲ್ಲಿಯೇ ಶಾಸಕರಿಗೆ ಕಾನೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೆವು. ಆದರೆ, ಮಂಜೂರು ಆಗಲಿಲ್ಲ. ಈ ಬಾರಿಯಾದರೂ 10 ಗುಂಟೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಡಬೇಕೆಂದು ಡಿಎಸ್‌ಎಸ್ (ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಡಿ. ರಾಮು ಒತ್ತಾಯಿಸಿದರು.
ಅವರು ಭಾನುವಾರ ತಾಲೂಕಿನ ಕಾನೂರಿನಲ್ಲಿ ಡಿ.ಎಸ್.ಎಸ್ (ಕೃಷ್ಣಪ್ಪ ಬಣ) ಆಯೋಜಿಸಿದ್ದ ತಾಲೂಕು ಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಅವರ 68 ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂರು ಗ್ರಾಮಕ್ಕೆ ಗಣಪತಿ ಪೆಂಡಾಲ್ ಅವಶ್ಯಕತೆ ಇದೆ. ಶಾಸಕರು ಅನುದಾನ ನೀಡಿ ಕಾಮಗಾರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಡಾ. ಬಿ.ಆರ್ .ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯವರೆಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಕೆಳ ವರ್ಗದ, ಹಿಂದುಳಿದ ವರ್ಗಗದವರ ಪಾಲಿಗೆ ಆಶಾಕಿರಣವಾದವರು. ನಾವೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕೆಂದು ಕರೆ ನೀಡಿದರು.
ತಾಲೂಕು ಸಂಚಾಲಕಿ ಪವಿತ್ರಾ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಒಂದೇ. ಜಾತಿ ಧರ್ಮವೆಲ್ಲ ಬಿಟ್ಟು ನಾವೆಲ್ಲರೂ ಮನುಷ್ಯರು ಎಂಬ ಭಾವನೆಯಿಂದ ಬಾಳಬೇಕು. ಮನುಷ್ಯತ್ವದ ಮುಂದೆ ಜಾತಿ, ಧರ್ಮ ಯಾವುದೂ ಬರುವುದಿಲ್ಲ. ನಾವು ಇನ್ನೊಬ್ಬರಿಗೆ ರಕ್ತ ಕೊಡುವಾಗ ಜಾತಿ ಕೇಳುವುದಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಹೋಗಿದ್ದರೆ ನಮ್ಮ ಜನಾಂಗ ಇಷ್ಟರ ಮಟ್ಟಿಗೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸಿದರು.