ಕನ್ನಡಪ್ರಭ ವಾರ್ತೆ ಗಂಗಾವತಿ
ಗಂಗಾಮತ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಹಾವೇರಿಯ ಜಿಲ್ಲೆಯ ಚೌಡದಾನಾಪುರದ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.ನಗರದ ಅಂಬಿಗರ ಚೌಡಯ್ಯ ಸರ್ಕಲ್‌ಗೆ ಗುರುವಾರ ಭೇಟಿ ನೀಡಿ, ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು.ಗಂಗಾಮತ ಸಮಾಜವು ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿದ್ದರೂ ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಸಮಾಜ ಅಭಿವೃದ್ಧಿಗೆ ಎಸ್ಟಿ ಮೀಸಲಾತಿ ಅನಿವಾರ್ಯವಾಗಿದೆ. ಮೀಸಲಾತಿ ಜಾರಿ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಹೀಗೆ ಮುಂದುವರಿದರೆ ಸಮಾಜದಿಂದ ದೆಹಲಿ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದರು.ಗಂಗಾಮತ ಸಮಾಜಕ್ಕೆ ಎಸ್ಟಿ ಮೀಸಲಾತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಕೇಂದ್ರ, ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಮೀಸಲಾತಿ ಜಾರಿ ಕುರಿತು ಸದ್ಯ ಕೇಂದ್ರ ಸರ್ಕಾರದ ಹಂತದಲ್ಲಿ ಇದ್ದು, ಕೇಂದ್ರ ಸರ್ಕಾರ ಕೂಡಲೇ ಮೀಸಲಾತಿ ನೀಡುವ ಕುರಿತು ಚಿಂತಂನೆ ನಡೆಸಬೇಕು. ಇಲ್ಲದಿದ್ದರೆ ಸಮಾಜದ ಯುವಕರು, ಹಿರಿಯರನ್ನು ಒಗ್ಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ದೆಹಲಿ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು. ಹೋರಾಟದ ಮೂಲಕ ಮಾತ್ರ ಮೀಸಲಾತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಮೀಸಲಾತಿ ಬೇಕಾದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.ಚೌಡಯ್ಯ ವಚನ ರಥೋತ್ಸವ:ಹಾವೇರಿ ಜಿಲ್ಲೆಯ ಚೌಡದಾನಾಪುರದಲ್ಲಿ ಜನೇವರಿ ೧೪, ೧೫ರಂದು ಅದ್ದೂರಿಯಾಗಿ ಚೌಡಯ್ಯ ವಚನ ರಥೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಸಮಾಜ ಒಗ್ಗೂಡಿಸಬೇಕು. ಪ್ರತಿಯೊಬ್ಬರು ಸಮಾನರು ಎನ್ನುವ ಮನೋಭಾವನೆ ತುಂಬಬೇಕು ಎನ್ನುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಬಾರಿಯೂ ವಚನ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಸಮಾಜ ಅಧ್ಯಕ್ಷ ಈ.ಧನರಾಜ, ಪ್ರಮುಖರಾದ ಹುಲಗಪ್ಪ, ಬೈರೇಶ್ ಇತರರಿದ್ದರು.