ತಾಂತ್ರಿಕ ಕೆಲಸ ಶ್ರೇಣಿ ವೇತನ, ಪದೋನ್ನತಿ ನೀಡಿ

KannadaprabhaNewsNetwork | Published : Feb 12, 2025 12:31 AM

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ನಗರದ ತಹಸೀಲ್ದಾರ್ ಕಚೇರಿ ಎದುರು 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

- ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಲ್ಲಿ ಸರ್ಕಾರಕ್ಕೆ ಮುಖಂಡರ ಆಗ್ರಹ- - - ಕನ್ನಡಪ್ರಭ ವಾರ್ತೆ ಹರಿಹರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ನಗರದ ತಹಸೀಲ್ದಾರ್ ಕಚೇರಿ ಎದುರು 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಮುಖಂಡರು ಮಾತನಾಡಿ, ಕಳೆದ ಸಲ ಮುಷ್ಕರ ನಡೆಸಿದಾಗ 8 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಇದರಿಂದ ತಾತ್ಕಾಲಿಕವಾಗಿ ಮುಷ್ಕರ ಕೈಬಿಡಲಾಗಿತ್ತು. 4 ತಿಂಗಳು ಕಳೆದರೂ ಯಾವುದೇ ಬೇಡಿಕೆ ನೆರವೇರಿಸದ ಹಿನ್ನೆಲೆ ಮತ್ತೆ ಮುಷ್ಕರ ಆರಂಭಿಸಿರುವುದಾಗಿ ತಿಳಿಸಿದರು.

ಸುಸಜ್ಜಿತ ಕಚೇರಿ, ಮೊಬೈಲ್, ಸಿಯುಜಿ ಸಿಮ್, ಡೆಟಾ, ಲ್ಯಾಪ್‍ಟಾಪ್, ಸ್ಕ್ಯಾನರ್, ಪ್ರಿಂಟರ್ ಹೀಗೆ ಯಾವುದೇ ಮೂಲ ಸೌಕರ್ಯಗಳನ್ನು ನೀಡದೇ, ತಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ. ಆದರೂ, ತಾಂತ್ರಿಕ ಕೆಲಸ ಶ್ರೇಣಿಯಲ್ಲಿ ವೇತನ ನೀಡುತ್ತಿಲ್ಲ. ಯಾವುದೇ ಪದೋನ್ನತಿ ನೀಡುತ್ತಿಲ್ಲ. ಪತಿ- ಪತ್ನಿಯ ವರ್ಗಾವಣೆ ಕೂಡ ಮಾಡುತ್ತಿಲ್ಲ. ನಮ್ಮನ್ನು ಡಿ ದರ್ಜೆ ನೌಕರರಿಗಿಂತ ಕೀಳಾಗಿ ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಆಧಾರ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ 51.5 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆ ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದ ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿಯ ಹುದ್ದೆಯ ವೃಂದ ಹಾಗೂ ನೇಮಕಾತಿ ತಿದ್ದುಪಡಿ ಮಾಡಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜೀವಹಾನಿ ಸಂಭವಿಸಿದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆ ₹500 ರಿಂದ ₹5 ಸಾವಿರ ಹೆಚ್ಚುವರಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆ ಸ್ಥಳಕ್ಕೆ ಧಾವಿಸಿದ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಕೆ. ಮನವಿ ಸ್ವೀಕರಿಸಿದರು. ಗ್ರಾಮ ಆಡಳಿತಾಧಿಕಾರಿ ನೌಕರರ ಸಂಘದ ಅಧ್ಯಕ್ಷ ಹೇಮಂತಕುಮಾರ್, ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ಖಜಾಂಚಿ ಸೌಮ್ಯ ಮಲ್ಲಿಕಾರ್ಜುನ, ಮಾರುತಿ, ಶಿವಪ್ರಕಾಶ್, ಹರೀಶ್, ಬೋರಯ್ಯ, ಪುಷ್ಪ ದೊಡ್ಡಮನಿ, ಅನ್ನಪೂರ್ಣ, ನವೀನ್ ಕಟ್ಟೇರ, ರೇಖಾ ಇತರರಿದ್ದರು.

- - - -11ಎಚ್‍ಆರ್‍ಆರ್04:

ಹರಿಹರದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಕೆ. ಅವರಿಗೆ ಮನವಿ ಸಲ್ಲಿಸಿದರು.

Share this article