ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ವಿವಿದ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರೆಂದು ನಿರ್ಲಕ್ಷ ತೋರದೇ ಒಟ್ಟಿಗೆ ಕರೆದೊಯ್ಯುವ ಪ್ರಯತ್ನಗಳ ಮಾಡಬೇಕೆಂದರು.
ವಿಕಲಚೇತನರಲ್ಲಿ ಸಾಮಾನ್ಯ ಜನರಿಗಿಂತಲೂ ಉತ್ತಮ ಪ್ರತಿಭೆ ಇರುತ್ತದೆ. ಶಿಕ್ಷಣ, ಕ್ರೀಡಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ವಿಕಲಚೇತನರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳು ಅವರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.ವಿಕಲಚೇತನರು ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಜನರು ಪ್ರೀತಿ ತೋರಿಸಬೇಕು. ಶ್ಯೂರಿಟಿ ಇಲ್ಲದೇ ಬ್ಯಾಂಕುಗಳು ಸಾಲ-ಸೌಲಭ್ಯ ನೀಡಿ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಅವರು ಸಾಲ ಮರುಪಾವತಿ ಮಾಡಿ, ದೇಶದ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಠಿಗೂ ನೆರವಾಗಲಿದ್ದಾರೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕ ಮಾತನಾಡಿ, 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ಜನ ವಿಕಲಚೇತನರು ಇದ್ದು, ವಿಕಲಚೇತನರು ಮುಖ್ಯವಾಹಿನಿಯಲ್ಲಿ ಸಾಮಾನ್ಯರಂತೆ ಜೀವಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಅಡೆತಡೆರಹಿತವಾಗಿ ಸೌಲಭ್ಯ ಅಥವಾ ನೆರವು ನೀಡಲು ಸರ್ಕಾರ ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ 2024-25ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯ ತಾಲೂಕುವಾರು ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ವಿಕಲಚೇತನ ವಿದ್ಯಾರ್ಥಿಗಳಾದ ಹೊಳಲ್ಕೆರೆ ಧನಂಜಯ, ಹೊಸದುರ್ಗ ಕೆ.ಎಚ್.ಭರತ್, ಮೊಳಕಾಲ್ಮುರು ಬಿ.ಪ್ರೇಮಕುಮಾರ, ಚಿತ್ರದುರ್ಗ ಜಿ.ಎಂ.ಚೇತನ, ಚಳ್ಳಕೆರೆ ಎ.ಮಾನಸ ಹಾಗೂ ಹಿರಿಯೂರಿನ ಸಿ.ಸಂಗೀತ ಅವರನ್ನು ಗೌರವಿಸಲಾಯಿತು.
ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪಿ.ಕೆ.ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯ ಕುಮಾರ್, ನಿರೂಪಣಾಧಿಕಾರಿ ಮಂಜುನಾಥ ಇದ್ದರು.