ಮಧ್ಯವರ್ತಿಗೆ ನೀಡದೇ ಖರೀದಿ ಕೇಂದ್ರಕ್ಕೆ ಕಡಲೆ ಕಾಳು ನೀಡಿ: ಡಿಸಿ

KannadaprabhaNewsNetwork |  
Published : Feb 09, 2025, 01:18 AM IST
8ಡಿಡಬ್ಲೂಡಿ1ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿರುವ ಕಡಲೆ ಕಾಳು ಉತ್ಪನ್ನ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ಖರೀದಿ ಪ್ರಕ್ರಿಯೆ ಪರಿಶೀಲಿಸಿದರು. | Kannada Prabha

ಸಾರಾಂಶ

ರೈತರ ಉತ್ಪನ್ನವನ್ನು ಸರ್ಕಾರ ಖರೀದಿ ಕೇಂದ್ರಗಳ ಮೂಲಕ ನೇರ ಖರೀದಿ ಮಾಡುತ್ತಿದೆ. ರೈತರು ಮಧ್ಯವರ್ತಿಗಳಿಗೆ ನೀಡದೆ, ಖರೀದಿ ಕೇಂದ್ರಕ್ಕೆ ನೀಡಬೇಕು. ರೈತರಿಗೆ ಮೋಸವಾಗದಂತೆ ಜಾಗೃತಿ ವಹಿಸಬೇಕು.

ಧಾರವಾಡ:

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿರುವ ಕಡಲೆ ಕಾಳು ಉತ್ಪನ್ನ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಖರೀದಿ ಪ್ರಕ್ರಿಯೆ ಪರಿಶೀಲಿಸಿದರು.ಈ ವೇಳೆ ರೈತರು ಮತ್ತು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ರೈತರಿಗೆ ಸಕಾಲದಲ್ಲಿ ಅನುಕೂಲವಾಗಲು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹ 5650 ದರ ನೀಡಿ ಖರೀದಿಸುತ್ತಿದೆ. ಬ್ಯಾಹಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರಿಗೆ ಇಲ್ಲಿನ ಖರೀದಿ ಕೇಂದ್ರದ ಬಗ್ಗೆ ಮಾಹಿತಿ ತಲುಪಬೇಕು ಮತ್ತು ರೈತರಿಗೆ ಖರೀದಿ ನೋಂದಣಿಗೆ ಅಗತ್ಯ ದಾಖಲೆಗಳು, ಕೊನೆಯ ದಿನಾಂಕ, ಖರೀದಿ ಕೇಂದ್ರ ತೆರೆಯುವ ಸಮಯ ಕುರಿತು ಡಂಗುರ ಸಾರುವ ಮೂಲಕ ಗ್ರಾಮಗಳಲ್ಲಿ ಮಾಹಿತಿ ನೀಡಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖರೀದಿ ಕೇಂದ್ರಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು. ರೈತರ ಉತ್ಪನ್ನವನ್ನು ಸರ್ಕಾರ ಖರೀದಿ ಕೇಂದ್ರಗಳ ಮೂಲಕ ನೇರ ಖರೀದಿ ಮಾಡುತ್ತಿದೆ. ರೈತರು ಮಧ್ಯವರ್ತಿಗಳಿಗೆ ನೀಡದೆ, ಖರೀದಿ ಕೇಂದ್ರಕ್ಕೆ ನೀಡಬೇಕು. ರೈತರಿಗೆ ಮೋಸವಾಗದಂತೆ ಜಾಗೃತಿ ವಹಿಸಬೇಕೆಂದರು.

ಖರೀದಿ ಕೇಂದ್ರದ ಉಸ್ತುವಾರಿ ಸುಭಾಸ ಗಿಡ್ನವರ ಮಾತನಾಡಿ, ಬ್ಯಾಹಟ್ಟಿ ಕಡಲೆ ಕಾಳು ಖರೀದಿ ಕೇಂದ್ರ ವ್ಯಾಪ್ತಿಗೆ ಬ್ಯಾಹಟ್ಟಿ, ಸುಳ್ಳ ಮತ್ತು ಕುಸುಗಲ್ಲ ಗ್ರಾಮಗಳ ಸುಮಾರು 1400 ರೈತರಿದ್ದಾರೆ. ಈಗಾಗಲೇ ಈ ಹಳ್ಳಿಗಳಲ್ಲಿ ಕರಪತ್ರ ಹಂಚಿ, ಬ್ಯಾನರ್ ಅಳವಡಿಸಿ ಖರೀದಿ ಕೇಂದ್ರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜನವರಿ 30ರಿಂದ ರೈತರಿಂದ ಕಡಲೆಕಾಳು ಖರೀದಿಗೆ ನೋಂದಣಿ ಮತ್ತು ಖರೀದಿ ಆರಂಭಿಸಲಾಗಿದೆ. ಏ. 12 ನೋಂದಣಿಗೆ ಕೊನೆಯ ದಿನ ಮತ್ತು ಖರೀದಿಗೆ ಏ. 22 ಅಂತಿಮ ದಿನವಾಗಿದೆ. ಆಧಾರ ಕಾರ್ಡ್‌, ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‌ಬುಕ್ ಮತ್ತು ಎಫ್‌ಐಡಿ ಸಂಖ್ಯೆಗಳು ರೈತರ ನೋಂದಣಿಗೆ ಅಗತ್ಯ ದಾಖಲೆ ಆಗಿವೆ. ಈಗಾಗಲೇ ರೈತರು ತಮ್ಮ ಹೆಸರು ನೋಂದಾಯಿಸಿದ್ದು, ಹಲವಾರು ರೈತರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಖರೀದಿ ಕೇಂದ್ರಕ್ಕೆ ಬಹಳಷ್ಟು ರೈತರು ಬರುತ್ತಿದ್ದಾರೆ. ಹೊರಗಿನ ಮಾರ್ಕೆಟ್‌ದಲ್ಲಿ ಸ್ವಲ್ಪ ದರ ಹೆಚ್ಚಿಗೆ ಇರುವುದರಿಂದ ಅಲ್ಲಿಗೂ ಹೊಗುತ್ತಿದ್ದಾರೆ. ಕಡಲೆ ರಾಶಿ ಈಗ ಆರಂಭ ಆಗಿರುವುದರಿಂದ ನಮ್ಮ ಭಾಗದ ರೈತರಿಗೆ ಈ ಖರೀದಿ ಕೇಂದ್ರ ಹೆಚ್ಚು ಅನುಕೂಲ ಮತ್ತು ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ತಹಸೀಲ್ದಾರ್‌ ಜೆ.ಬಿ. ಮಜ್ಜಗಿ, ಬ್ಯಾಹಟ್ಟಿ ಗ್ರಾಪಂ ಪಿಡಿಒ ರೇಣುಕಾ ಚಿತ್ತಾಪುರ, ಕಂದಾಯ ನಿರೀಕ್ಷಕ ಐ.ಎಫ್. ಅಯ್ಯನಗೌಡ್ರ, ಗ್ರಾಮ ಆಡಳಿತ ಅಧಿಕಾರಿ ಎಂ.ಆರ್. ನಿಟ್ಟೂರ, ರೈತರಾದ ಮನೋಹರ ಮರಿಗೌಡ, ರುದ್ರಗೌಡ ಮಳಲಿ, ಯಲ್ಲಪ್ಪ ನವಲೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?