ದುರಭ್ಯಾಸ ಬದಿಗಿಟ್ಟು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ: ಡೀಸಿ ಲತಾಕುಮಾರಿ

KannadaprabhaNewsNetwork |  
Published : Jul 11, 2025, 11:48 PM IST
11ಎಚ್ಎಸ್ಎನ್14 :  | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರು ಈಗಾಗಲೇ ಸಭೆ ನಡೆಸಿ, ಶಾಲಾ- ಕಾಲೇಜು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ. ಜೊತೆಗೆ ದುಶ್ಚಟಗಳ ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ದುರಭ್ಯಾಸಗಳನ್ನು ಬದಿಗಿಟ್ಟು ಉತ್ತಮ ಜೀವನ ಶೈಲಿಯನ್ನು ಬೆಳೆಸಿಕೊಂಡಲ್ಲಿ ಸದೃಢ ಆರೋಗ್ಯ ನಿರ್ಮಾಣ ಸಾಧ್ಯ ಹಾಗೂ ಪ್ರತಿನಿತ್ಯ ಕೆಲ ಸಮಯ ವಾಕ್ ಮಾಡುವುದರ ಮೂಲಕ ಹೃದಯವನ್ನು ಉತ್ತಮವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ವತಿಯಿಂದ ಹಾಸನ ನಗರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶುಕ್ರವಾರ ಬೆಳಗ್ಗೆ ಆಯೋಜಿಸಲಾಗಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಆರೋಗ್ಯಕರ ಜೀವನಕ್ಕೆ ಅನುಸರಿಸಬೇಕಾದ ಜೀವನ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಜಾಥಾ ಆಯೋಜಿಸಲಾಗಿದೆ. ಪ್ರತಿಯೊಬ್ಬರು ದುರಭ್ಯಾಸಗಳನ್ನು ಬದಿಗಿಟ್ಟು ಒಳ್ಳೆಯ ಜೀವನ ಶೈಲಿಯನ್ನು ಬೆಳೆಸಿಕೊಂಡಲ್ಲಿ ಸದೃಢ ಆರೋಗ್ಯ ನಿರ್ಮಾಣ ಸಾಧ್ಯ ಎಂದರು. ಹಾಸನ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಭಯ ಬೇಡ, ಎಚ್ಚರ ಅಗತ್ಯ ಎಂದು ಕಿವಿಮಾತು ಹೇಳಿದರು.

ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಪದ್ಧತಿ ರೂಢಿಸಿಕೊಂಡು ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರು ಈಗಾಗಲೇ ಸಭೆ ನಡೆಸಿ, ಶಾಲಾ- ಕಾಲೇಜು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ. ಜೊತೆಗೆ ದುಶ್ಚಟಗಳ ಪರಿಣಾಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಿ ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಅವರ ಎಲ್ಲಾ ಸೂಚನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.

ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ ಗೀತಾ, ಜಿಲ್ಲಾ ಆರೋಗ್ಯಾಧಿಕಾರಿ ಅನೀಲ್ ಕುಮಾರ್, ಡಾ. ವಿಜಯ್, ವೈದ್ಯರಾದ ಡಾ. ಅಬ್ದೂಲ್ ಬಶೀರ್, ಡಾ. ದಿನೇಶ್, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್. ರಮೇಶ್, ಕಾರ್ಯದರ್ಶಿ ಸಿ. ಶಿವಸ್ವಾಮಿ, ರವಿಕುಮಾರ್ ಬಲ್ಲೆನಹಳ್ಳಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ಮಾಜಿ ಅಧ್ಯಕ್ಷ ಎಚ್.ಕೆ. ನಾಗೇಶ್, ಗಿರೀಗೌಡ, ರೋಟರಿ ಕ್ಲಬ್ ಮಂಜುನಾಥ್, ಭಾರತ ಸೇವಾದಳದ ವಲಯ ಸಂಘಟಕಿ ವಿ.ಎಸ್. ರಾಣಿ, ಕಲಾವಿದ ಬಿ.ಟಿ. ಮಾನವ ಸೇರಿ ನೂರಾರು ಸಂಖ್ಯೆಯ ಸಂಘ- ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!