ಹುಸಿ ಆತ್ಮವಿಶ್ವಾಸ ಬಿಟ್ಟು ವಿದ್ಯಾರ್ಜನೆ ಮಾಡಿ: ಬಸವ ಮರುಳಸಿದ್ದ ಸ್ವಾಮೀಜಿ

KannadaprabhaNewsNetwork |  
Published : Aug 18, 2026, 02:15 AM IST
ಬಸವ | Kannada Prabha

ಸಾರಾಂಶ

ಚಿಕ್ಕಮಗಳೂರುಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರಷ್ಟೇ ಸಾಲದು, ಮುಂದಿನ ಹಂತದಲ್ಲೂ ಹುಸಿ ಆತ್ಮವಿಶ್ವಾಸವನ್ನು ಬಿಟ್ಟು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕೆಂದು ಬಸವ ತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಎಸ್‌ಎಸ್‌ಎಲ್ ಸಿ- ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರಷ್ಟೇ ಸಾಲದು, ಮುಂದಿನ ಹಂತದಲ್ಲೂ ಹುಸಿ ಆತ್ಮವಿಶ್ವಾಸವನ್ನು ಬಿಟ್ಟು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕೆಂದು ಬಸವ ತತ್ವ ಪೀಠದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಹಳಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಅತಿ ಹೆಚ್ಚು ಅಂಕ ಗಳಿಸುತ್ತಾರೆ. ಆದರೆ, ಮುಂದಿನ ಹಂತದ ವಿದ್ಯಾಭ್ಯಾಸದಲ್ಲಿ ನಾವು ಹೇಗೆ ಓದಿದರೂ ಅತಿ ಹೆಚ್ಚು ಅಂಕ ಗಳಿಸುತ್ತೇವೆ ಎಂಬ ಹುಸಿ ಆತ್ಮವಿಶ್ವಾಸದಿಂದ ನಿರ್ಲಕ್ಷ್ಯ ವಹಿಸಿ ಅಂಕ ಗಳಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂದರು.

ವಿದ್ಯಾರ್ಥಿಗಳು ಶಿಕ್ಷಣವಂತರಾದರಷ್ಟೇ ಸಾಲದು, ಆಚಾರವಂತರೂ, ಸಂಸ್ಕಾರವಂತರೂ, ಉತ್ತಮ ನಾಗರಿಕರೂ ಆಗಬೇಕು. ಶಿಕ್ಷಣದ ಜೊತೆ ಜೊತೆಗೆ ಬದುಕಿನ ಕೌಶಲ್ಯ ಕಲಿಯಬೇಕು ಎಂದು ಕಿವಿಮಾತು ಹೇಳಿದರು.ಸರ್ಕಾರಿ ನೌಕರರ ಸಂಘ ಜಿಲ್ಲೆಯಲ್ಲಿ ಮತ್ತು ಇಡೀ ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪ್ರೋತ್ಸಾಹಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದರು.ಎ ಐ ಟಿ ಪ್ರಾಂಶುಪಾಲ ಡಾ ಎಂ.ಎ.ಗೌತಮ್ ಮಾತನಾಡಿ, ಅತಿ ಹೆಚ್ಚು ಅಂಕ ಗಳಿಸಿ ಶಿಕ್ಷಿತರಾಗುವುದರಿಂದ ಉದ್ಯೋಗ ದೊರೆಯುವುದಿಲ್ಲ, ಅದರ ಜೊತೆಗೆ ಉತ್ತಮ ಕೌಶಲ್ಯವಿದ್ದರೆ ಮಾತ್ರ ಉದ್ಯೋಗ ಲಭಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿ ದಿನ ಕಲಿಯಬೇಕು. ಕೌಶಲ್ಯಬೆಳೆಸಿಕೊಳ್ಳಬೇಕು. ಒಳ್ಳೆಯ ಹವ್ಯಾಸ ರೂಡಿಸಿಕೊಂಡು ಉತ್ತಮ ನಾಗರೀಕರಾಗಬೇಕು ಎಂದು ಸಲಹೆ ನೀಡಿದರು.

ಯುವ ಜನತೆ ವಿದ್ಯಾವಂತರದಷ್ಟೇ ಸಾಲದು, ಗುಣವಂತರು, ಸಂಸ್ಕಾರವಂತರೂ ಆಗಬೇಕು, ಮಾನವೀಯ ಮೌಲ್ಯ ಗಳನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಹೆತ್ತವರು ತಮ್ಮ ಮಕ್ಕಳ ಚಲನವಲನ ನಿರಂತರವಾಗಿ ಗಮನಿಸಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿದರು, ಮಂಕುತಿಮ್ಮನ ಕಗ್ಗ ಪ್ರವಚನ ಖ್ಯಾತಿ ವಾಗ್ಮಿ ಜಿ.ಎಸ್.ನಟೇಶ್, ಸರ್ಕಾರಿ ನೌಕರರ ಸಂಘದ ರಾಜ್ಯಉಪಾಧ್ಯಕ್ಷ ಲೋಕೇಶ್, ಹಿರಿಯ ಉಪಾಧ್ಯಕ್ಷ ಸೋಮಶೇಖರಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜು, ಜಿಲ್ಲಾ ಕಾರ್‍ಯಾಧ್ಯಕ್ಷ ಬಿ.ಎನ್.ಸುಂದರೇಶ್, ಗೌರವಾಧ್ಯಕ್ಷ ಬಿ.ಎಂ.ಉಮೇಶ್, ರಾಜ್ಯ ಪರಿಷತ್ ಸದಸ್ಯ ಕೆ.ಸಿ.ಮಂಜುನಾಥ್, ಕಾರ್‍ಯದರ್ಶಿ ಟಿ.ಪದ್ಮರಾಜು, ಖಜಾಂಚಿ ಎಸ್.ಟಿ.ಪೂರ್ಣೇಶ್, ತರೀಕೆರೆ ತಾಲೂಕು ಅಧ್ಯಕ್ಷ ಅನಂತ್, ಶೃಂಗೇರಿ ತಾಲೂಕು ಅಧ್ಯಕ್ಷ ಬಿ.ಜಿ.ನಾಗೇಶ್, ಅಜ್ಜಂಪುರ ಅಧ್ಯಕ್ಷ ಎಸ್.ಎಂ. ಪುಟ್ಟಸ್ವಾಮಿ, ಎನ್‌ಆರ್ ಪುರದ ಎನ್. ಎಲ್. ಮುನೀಶ್, ಕಡೂರು ತಾಲೂಕು ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

-- ಬಾಕ್ಸ್‌--

ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಪದ್ಧತಿಯನ್ನೇ ಮತ್ತೆ ಮುಂದುವರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ತಮಗೆ ಭರವಸೆ ನೀಡಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಿಂಚಣಿ ಯೋಜನೆಯೊಂದಿಗೆ ನಿವೃತ್ತ ನೌಕರರಿಗೆ ಸಂಧ್ಯಾಕಿರಣ ಎಂಬ ನೂತನ ಯೋಜನೆ ಜಾರಿಗೆ ತರುವುದಾಗಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ ಎಂದರು.

ಇನ್ನೂ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ೧೨ ವರ್ಷಗಳಿಂದ ರಾಜ್ಯದ ೬೦ ಸಾವಿರದಷ್ಟು ವಿದ್ಯಾರ್ಥಿ ಗಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮಕುಟುಂಬಕ್ಕಷ್ಟೇ ಸೀಮಿತರಾಗದೇ ಸಮಾಜಮುಖಿಗಳಾಗಬೇಕು. ನನ್ನ ಊರು, ನನ್ನ ಜಿಲ್ಲೆ, ನನ್ನರಾಜ್ಯ, ನನ್ನ ದೇಶ ಚೆನ್ನಾಗಿರಬೇಕು ಎಂದು ಸದಾ ತುಡಿಯಬೇಕು. ಹಾಗಾದಾಗ ಮಾತ್ರ ರಾಷ್ಟ್ರಅಭಿವೃದ್ಧಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಹೆತ್ತವರನ್ನು ಮುಪ್ಪಿನಲ್ಲಿ ವೃದ್ಧಾಶ್ರಮಕ್ಕೆ ಅಟ್ಟದೇ ಅವರನ್ನು ಕೊನೆಯವರೆಗೂ ಪ್ರೀತಿಯಿಂದ ಸಾಕಿ ಸಲಹಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ