ಕೊಪ್ಪಳ: ಕಾರ್ಮಿಕ ವರ್ಗದ ಶ್ರಮಕ್ಕೆ ಗೌರವ ನೀಡಬೇಕು ಹಾಗೂ ಅವರಿಗಿರುವ ಹಕ್ಕುಗಳನ್ನು ದೊರಕಿಸಿ ಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.
ಶ್ರಮಿಕರ ಬೆವರಿನ ಬೆಲೆಗೆ ತಕ್ಕ ಗೌರವ ಸಿಗಬೇಕು.ಶ್ರಮಿಕ ಮತ್ತು ಮಾಲೀಕನ ಸಂಬಂಧ ತಂದೆ,ಮಕ್ಕಳ ರೀತಿಯಲ್ಲಿರಬೇಕು. ಕಾರ್ಮಿಕರಿಗೆ ತಾರತಮ್ಯ ಮಾಡದೆ ಕೆಳಹಂತದ ಕಾರ್ಮಿಕ ಇರಲಿ ಅಥವಾ ಮೇಲ್ಮಟ್ಟದ ಅಧಿಕಾರಿ ಇರಲಿ, ಎಲ್ಲರ ಕೆಲಸಕ್ಕೆ ಗೌರವ ದೊರಕಬೇಕು ಎಂದರು.
ಕಾರ್ಮಿಕರ ಸಮಸ್ಯೆಗಳಿದ್ದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದ ಅವರು, ಕಾರ್ಮಿಕರಿಗಾಗಿ ಇರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು.ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದವರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಕಾರ್ಮಿಕ ನಿರೀಕ್ಷಕಿ ಮಂಜುಳಾ, ಕಾರ್ಮಿಕ ದಿನಾಚರಣೆ ವಿಶೇಷತೆ ಕುರಿತು ತಿಳಿಸಿದರು. ಒಕ್ಕೂಟದ ಅಧ್ಯಕ್ಷ ರಮೇಶ ಘೋರ್ಪಡೆ, ಇಲಾಖೆಯ ಸೌಲಭ್ಯಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ನಿರೂಪಿಸಿದರು. ಎಕ್ಸಿಕ್ಯೂಟಿವ್ ಹೇಮಂತ್ ಸಿಂಗ್ ಸ್ವಾಗತಿಸಿದರು ಹಾಗೂ ದಾದಾಪೀರ ರವರು ವಂದಿಸಿದರು.