ಮುಂಡರಗಿ: ಕೇವಲ ಅಕ್ಷರಾಭ್ಯಾಸ ಮಾತ್ರ ಶಿಕ್ಷಣವಲ್ಲ. ಅದರ ಜತೆಗೆ ಮನುಷ್ಯನಿಗೆ ಸಂಸ್ಕಾರ ಕೊಡುವಂತಹ ಕೆಲಸವೂ ನಡೆಯಬೇಕು. ಅದು ನಿಜವಾದ ಶಿಕ್ಷಣ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ತಿಳಿಸಿದರು.
ಮಕ್ಕಳಲ್ಲಿರುವ ನೈಜವಾದ ಪ್ರತಿಭೆ ಹೊರತರುವ ಕೆಲಸ ಶಿಕ್ಷಣದಿಂದ ಆಗಬೇಕು. ಅಂತಹ ಶಿಕ್ಷಣದಿಂದ ಮಾತ್ರ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ವಿಕಸನಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದೆ ತಮ್ಮ ಬದುಕನ್ನು ಸರಿಯಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಒಳ್ಳೆಯ ಸಂಸ್ಕಾರ ನೀಡುವಂತಹ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವಂತಹ ಕಾರ್ಯ ಮಾಡುವುದು ನಿಜವಾದ ಶಿಕ್ಷಣ. ಅಂತಹ ನೈತಿಕವಾದ ಶಿಕ್ಷಣವನ್ನು ಕೊಡುವ ಕಾರ್ಯವನ್ನು ನಮ್ಮ ಸಿಬಿಎಸ್ಇ ಶಾಲೆಯ ಶಿಕ್ಷಕರು ಮಾಡುತ್ತ ಬಂದಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಮಗುವನ್ನು ದೇವರು ಈ ಭೂಮಿಗೆ ಬರಿಗೈಯಲ್ಲಿ ಕಳಿಸಿರುವುದಿಲ್ಲ. ಆ ಮಗುವಿಗೆ ಒಂದಿಲ್ಲೊಂದು ಶಕ್ತಿ, ಕಲೆ ಕೊಟ್ಟಿರುತ್ತಾನೆ. ಹೀಗಾಗಿ, ಪಾಲಕರು ಮತ್ತು ಶಿಕ್ಷಕರು ಆ ಕೌಶಲ್ಯವನ್ನು ಗುರುತಿಸಿ, ಅದನ್ನು ಬೆಳೆಸಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.ತಾಪಂ ಇಒ ವಿಶ್ವನಾಥ ಹೊಸಮನಿ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಸಾಧನೆ ಶಿಖರವನ್ನೇರಿದ ಮಕ್ಕಳನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಧ್ರುವಕುಮಾರ ಹೊಸಮನಿ, ಹೇಮಗಿರೀಶ ಹಾವಿನಾಳ, ಈಶಣ್ಣ ಬೆಟಗೇರಿ, ಪ್ರಾ. ಶರಣ್ ಕುಮಾರ ಬುಗುಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಶಂಕರ್ ಕುರಿಯವರ, ಪೃತ್ವಿ ದೇಸಾಯಿ ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.