ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇತ್ತೀಚೆಗೆ ಭಿಕ್ಷಾಟನೆ ಒಂದು ಉದ್ಯೋಗ ಎಂಬಂತಾಗಿದೆ. ಆದರೆ ಅದು ಅಪರಾಧ. ಭಿಕ್ಷಾಟನೆ ಮಾಡುವವರನ್ನು ಶಿಕ್ಷಿಸಲು ಕಾನೂನಿನಲ್ಲಿ ಅಕಾಶವಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮರಾಜೇ ಅರಸು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಪೊಲೀಸ್ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ವೃತ್ತ , ಸಾರ್ವಜನಿಕ ಬಸ್ ನಿಲ್ದಾಣ, ಆಟೋ ಸ್ಟ್ಯಾಂಡ್, ಖಾಸಗಿ ಬಸ್ ನಿಲ್ದಾಣ ಹಾಗೂ ವಿವಿಧ ಜನಸಂದಣಿ ಸ್ಥಳಗಳಲ್ಲಿ ಭಿಕ್ಷಾಟನೆ ಹಾಗೂ ಬೀದಿಬದಿಯಲ್ಲಿ ವಾಸಿಸುವ ಮಕ್ಕಳ ಕಾರ್ಯಚರಣೆಯ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಭಿಕ್ಷುಕರಿಗೆ ಭಿಕ್ಷೆ ನೀಡಬೇಡಿ: ಸಾರ್ವಜನಿಕರು ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ. ಭಿಕ್ಷಾಟನೆಯನ್ನು ಒಂದು ಲಾಭದಾಯಕ ಉದ್ಯೋಗ ಮಾಡಿಕೊಂಡ ಭಿಕ್ಷುಕರೂ ಇದ್ದಾರೆ. ಆದರೆ ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯಿಂದ ಬಿಕ್ಷೆ ಬೇಡುವ ಕಾಯಕಕ್ಕೆ ಇಳಿಯುತ್ತಾರೆ. ಯಾರೇ ಆಗಲಿ ತನ್ನ ಮನೆಯಲ್ಲಿ ಆತ್ಮಗೌರವದೊಂದಿಗೆ ಎರಡು ಹೊತ್ತಿನ ಊಟ ಸಿಕ್ಕುವವರು ಭಿಕ್ಷೆ ಬೇಡಲಾರರು ಎಂದರು.
ಭಿಕ್ಷಾಟನೆಯನ್ನು ಅಪರಾಧವೆಂದು ಘೋಷಿಸಿ ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನೊಂದು ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ಕಾನೂನಿನಲ್ಲಿ ಭಿಕ್ಷುಕರ ಬಗ್ಗೆ ಸ್ವಲ್ಪ ಮಾನವೀಯ ದೃಷ್ಟಿಯೂ ಇದೆ- ಅವರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ, ಅವರನ್ನು ಬಂಧಿಸಿದರೂ ಒಂದರಿಂದ ಮೂರು ವರ್ಷಗಳವರೆಗೆ ಪರಿಹಾರ ಕೇಂದ್ರದಲ್ಲಿ ಇರಬೇಕಾಗುತ್ತದೆ ಎಂದರು.
ಭಿಕ್ಷುಕರಿಗೆ ಪರಿಹಾರ ನೀಡುವ ವ್ಯವಸ್ಥೆ: ಪರಿಹಾರ ಕೇಂದ್ರದಿಂದ ಹೊರಬಂದ ಬಳಿಕವೂ ಮತ್ತೆ ಮತ್ತೆ ಭಿಕ್ಷಾಟನೆ ಮಾಡುವವರನ್ನು ಜೈಲಿಗೆ ದೂಡುತ್ತದೆ. 1976ರ ಏಪ್ರಿಲ್ ಒಂದರಂದು ರಾಜ್ಯದಲ್ಲಿ ಭಿಕ್ಷುಕರಿಗೆ ಪರಿಹಾರ ನೀಡುವ ವ್ಯವಸ್ಥೆ ಇರುವ ಹಲವು ನಗರಗಳಲ್ಲಿ ಜಾರಿಗೆ ತರಲಾಗಿದೆ.
ನಂತರ ರಾಜ್ಯದ ಎಲ್ಲಾ ಕಡೆಗೆ ಅವರಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದರಿಂದ ರಾಜ್ಯದಲ್ಲೆಲ್ಲ 1997ರ ನವೆಂಬರ್ 6ರಂದು ಜಾರಿಗೆ ತರಲಾಯಿತು ಎಂದು ಹೇಳಿದರು.ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಬಾಲಗಂಗಾದರ್ ಮಾತನಾಡಿ, ಬೀದಿಬದಿ ಹಾಗೂ ಭಿಕ್ಷಾಟನೆ ಮಾಡುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಮಕ್ಕಳ ಕಲ್ಯಾಣ ಸಮಿತಿಯಿದ್ದು ಸದಾ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿದೆ ಹಾಗಾಗಿ ಸಾರ್ವಜನಿಕರು ಇಂತಹ ಮಕ್ಕಳು ಎಲ್ಲಿಯ ಕಂಡುಬಂದರೂ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು. ಸಹಾಯವಾಣಿಗೆ ಕರೆ ಮಾಡಿ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ಡಿ.ಕನ್ಯೆಪ್ಪ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ 18 ವರ್ಷದೊಳಗಿನ ಎಲ್ಲ ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆ ಅವಶ್ಯಕತೆ ಇರುವ ಮಕ್ಕಳ ಪುನರ್ವಸತಿ ಕಲ್ಪಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದೆ.
ಭಿಕ್ಷಾಟಣೆ, ಬೀದಿಬದಿ ಮಕ್ಕಳು, ಚಿಂದಿ ಆಯುವ ಮಕ್ಕಳು, ಬಾಲಕಾರ್ಮಿಕರು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ1098 ಅಥವಾ 112 ಗೆ ಮಾಹಿತಿ ನೀಡಲು ತಿಳಿಸಿದರುನಗರದ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆ ಹಾಗೂ ಬೀದಿಬದಿಯಲ್ಲಿ ವಾಸಿಸುವ ಮಕ್ಕಳ ಕಾರ್ಯಚರಣೆ ನಡೆಸಿ,ಬಿತ್ತಿ ಪತ್ರಗಳ ಪ್ರದರ್ಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ವೇಳೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾದರಯ್ಯ, ಮಕ್ಕಳ ರಕ್ಷಣಾಧಿಕಾರಿ ಅಸಾಂಸ್ಥಕ ಗಾಯತ್ರಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮತ್ತಿತರರು ಇದ್ದರು.