ಬೀದರ್: ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಒಂದು ಒಳ್ಳೆಯ ಸಂಕೇತವಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ನುಡಿದರು.ಇಲ್ಲಿನ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾನುವಾರ ಶ್ರೀ ನಾನಕ ಝಿರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಸರ್ದಾರ್ ಜೋಗಾಸಿಂಗ್ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 9 ಸಾಧಕರಿಗೆ ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ 2026 ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಗುರುನಾನಕ ಶಿಕ್ಷಣ ಸಂಸ್ಥೆಯಿಂದ ಪ್ರಶಸ್ತಿ ಕೊಡುವ ಪದ್ಧತಿಯನ್ನು ಪ್ರಶಂಸಿದ ಸಚಿವರು, ಸಾಧಕರ ನೇಮಕಾತಿ ಮಾಡಲು ಉತ್ತಮವಾದ ಮಾರ್ಗಸೂಚಿಯನ್ನು ಪಾಲಿಸುತ್ತಿದ್ದಾರೆ ಎಂದು ನುಡಿದರು.ವಿಧಾನ ಪರಿಷತ್ತಿನ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಸಿಖ್ ಧರ್ಮದವರು ಪ್ರಮಾಣಿಕತೆ ಮತ್ತು ಶ್ರಮಜೀವಿಗಳಾಗಿರುತ್ತಾರೆ. ಅವರು ನಮ್ಮ ದೇಶದ ಗಡಿಯಲ್ಲಿ ನಿಂತು ನಿರಂತರವಾಗಿ ದೇಶದ ಜನರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದರು.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನವದೆಹಲಿಯ ಮಾಜಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ್ ಅವರಿಗೆ ರಾಷ್ಟ್ರೀಯ ಶಿಕ್ಷಣ ಕೃಪಾಚಾರ್ಯ ಪ್ರಶಸ್ತಿ ಕೊಟ್ಟಿದ್ದಕ್ಕೆ ನನಗೆ ಬಹಳ ಖುಷಿ ತಂದಿದೆ ಎಂದ ಅವರು, ನಮ್ಮ ದೇಶದಲ್ಲಿ ಬಹಳ ಕಡಿಮೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ಇತ್ತ ಗಂಭೀರ ಚಿಂತನೆ ಮಾಡಬೇಕಾದ ಕಾಳಜಿಯ ವಿಷಯವಾಗಿದೆ ಎಂದು ಕಿವಿಮಾತು ಹೇಳಿದರು.ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿ, ಎಲ್ಲಾ ಪ್ರಶಸ್ತಿಗಾರರನ್ನು ಮತ್ತು ಇತರೆ ಗಣ್ಯರನ್ನು ಸ್ವಾಗತಿಸಿ ನಿಜವಾದ ನಾಯಕ ಪದವಿ ಹೊಂದಿದವನು ಅಲ್ಲ. ಇದಕ್ಕೆ ಮೀರಿ ಪ್ರಾಮಾಣಿಕತೆಯಿಂದ ಸಮಾಜಕ್ಕೆ ದಾರಿ ತೋರಿಸುವವನೇ ನಿಜವಾದ ನಾಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೇಂದ್ರ ರಾಜ್ಯ ರೇಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಅವರಿಗೆ ರಾಷ್ಟ್ರೀಯ ಲೋಕಸೇವಾ ಮಹಾ ರತ್ನ ಪ್ರಶಸ್ತಿ, ಕನ್ನಡ ಚಲನಚಿತ್ರ ನಟ ಡಾ.ಶಿವರಾಜ್ ಕುಮಾರ ಅವರಿಗೆ ಅಭಿನಯ ಸಾರ್ವಭೌಮ ಪ್ರಶಸ್ತಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನವದೆಹಲಿಯ ಮಾಜಿ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ್ ಅವರಿಗೆ ರಾಷ್ಟ್ರೀಯ ಶಿಕ್ಷಣ ಕೃಪಾಚಾರ್ಯ ಪ್ರಶಸ್ತಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮತ್ತು ಅದಮ್ಯ ಚೇತನ ಫೌಂಡೇಶನ್ ಬೆಂಗಳೂರಿನ ಅಧ್ಯಕ್ಷ ಡಾ.ತೇಜಸ್ವಿನಿ ಅನಂತಕುಮಾರ ಅವರಿಗೆ ಜೀವನ ಸೇವಾ ಮಹಾ ರತ್ನ ಪ್ರಶಸ್ತಿ, ಹೈಕೋರ್ಟ್ ಕಲಬುರಗಿ ಪೀಠದ ಕಲಬುರಗಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ.ಅರ್ಚನಾ ಪ್ರದೀಪ ತಿವಾರಿ ಅವರಿಗೆ ನ್ಯಾಯ ಸೇವಾ ವಿಶಿಷ್ಠ ರತ್ನ ಪ್ರಶಸ್ತಿ, ಹೈದ್ರಾಬಾದ್‌ನ ಪ್ರೀಮಿಯರ್ ಎನರ್ಜಿ ಲಿಮಿಟೆಡ್ ಅಧ್ಯಕ್ಷ ಸುರೇಂದರ್ ಪಾಲಸಿಂಗ್ ಅವರಿಗೆ ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ. ಆಕ್ಸೆಂಚರ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ ಸಿಂಗ್ ಭಾಟಿಯಾ ಅವರಿಗೆ ಜಾಗತಿಕ ಹಳೆಯ ವಿದ್ಯಾರ್ಥಿಗಳ ನಾಯಕತ್ವ ಪ್ರಶಸ್ತಿ, ಹೆಸರಾಂತ ಗುರ್ಬಾನಿ ಅನುವಾದಕ ಮತ್ತು ಕನ್ನಡ ಸಾಹಿತ್ಯ ವಿದ್ವಾಂಸ ಚಂಡೀಗಢದ ಪುಂಡಿತರಾವ್ ಧರೇನವರ್ ಅವರಿಗೆ ಗುರ್ಬಾನಿ-ಕನ್ನಡ ಭಾಷಾ ಸೇತು ಪ್ರಶಸ್ತಿ. ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ ಇವರಿಗೆ ಉನ್ನತ ಶಿಕ್ಷಣ ಮತ್ತು ಕೃಷಿ ದಾರ್ಶನಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.