ಅನಾಥರಿಗೆ ಶಿಕ್ಷಣ ಜೊತೆ ಅನ್ನ ನೀಡುವ ಕಾರ್ಯ ಶ್ರೇಷ್ಠ: ವಿಜಯಕುಮಾರ ಬಿರಾದಾರ

KannadaprabhaNewsNetwork | Published : Jun 10, 2024 12:53 AM

ಸಾರಾಂಶ

ಭಾನುವಾರ ಲಕ್ಷ್ಮೇಶ್ವರ ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ನಡೆಸುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆಗೆ ಬೀದರ ಜಿಲ್ಲೆಯ ಸೋನಾಳ ಗ್ರಾಮದ ಉದ್ದಿಮೆದಾರ ವಿಜಯಕುಮಾರ ಬಿರಾದಾರ ಆಹಾರ ಧಾನ್ಯ ದೇಣಿಗೆ ನೀಡಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಅನಾಥ ಹಾಗೂ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡುವ ಜೊತೆಯಲ್ಲಿ ಶಿಕ್ಷಣ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕಾರ್ಯವನ್ನು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾ ಸ್ವಾಮಿಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬೀದರ ಜಿಲ್ಲೆಯ ಸೋನಾಳ ಗ್ರಾಮದ ಉದ್ದಿಮೆದಾರ ವಿಜಯಕುಮಾರ ಬಿರಾದಾರ ಹೇಳಿದರು.

ಭಾನುವಾರ ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ನಡೆಸುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆಗೆ ಬೇಕಾಗಿರುವ ಆಹಾರ ಧಾನ್ಯ ದೇಣಿಗೆ ನೀಡಿ ಮಾತನಾಡಿದರು.

ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ, ಶಿಕ್ಷಣದ ಜೊತೆಯಲ್ಲಿ ಅನ್ನ ಮತ್ತು ಆಶ್ರಯ ನೀಡುವ ಮೂಲಕ ಅನಾಥ ಮತ್ತು ಬಡ ಮಕ್ಕಳಿಗೆ ಪಾಲನೆ ಮತ್ತು ಪೋಷಣೆ ಮಾಡುವುದು ಸುಲಭದ ಮಾತಲ್ಲ. ಹೂವಿನ ಶಿಗ್ಲಿಯ ವಿರಕ್ತಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯೆ ಕೊಡುತ್ತಿರುವ ಕಾರ್ಯ ಶ್ಲಾಘನೀಯ. ಉತ್ತರ ಕರ್ನಾಟಕದ ಅನೇಕ ವಿರಕ್ತಮಠಗಳು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಉಚಿತ ಶಿಕ್ಷಣ ನೀಡುವ ಮೂಲಕ ಯಾವ ವಿಶ್ವವಿದ್ಯಾಲಯಗಳೂ ಮಾಡದಂತ ಕೆಲಸವನ್ನು ಇಂತಹ ಮಠ ಮಾನ್ಯಗಳು ಮಾಡುತ್ತಿರುವುದು ಸಣ್ಣ ಕಾರ್ಯವಲ್ಲ. ಮಠ ಮಾನ್ಯಗಳು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಯಾವುದೇ ಧರ್ಮ ಮತ್ತು ಜಾತಿ ನೋಡದೆ ನೀಡುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡುವ ಕಾರ್ಯವನ್ನು ವಿರಕ್ತಮಠಗಳು ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು.

ಈ ವೇಳೆ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ದಾನ ಮಾಡುವುದು ಸುಲಭದ ಮಾತಲ್ಲ. ಇಂದಿನ ಕಾಲದಲ್ಲಿ ಎಲ್ಲವೂ ನನಗೆ ಇರಲಿ ಎಂದು ಬಾಚಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ವಿರಕ್ತಮಠಕ್ಕೆ ಸುಮಾರು ₹7.20 ಲಕ್ಷ ಮೌಲ್ಯದ ಆಹಾರ ಧಾನ್ಯಗಳನ್ನು ಸೋನಾಳ ಗ್ರಾಮದ, ಪ್ರಸ್ತುತ ಪುಣೆಯಲ್ಲಿ ಉದ್ದಿಮೆದಾರಾಗಿರುವ ವಿಜಯಯಕುಮಾರ ಬಿರಾದಾರ ಅವರು ದಾನ ಮಾಡುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಸಮಾಜದ ಸೇವೆಗೆ ನಿಂತ ವಿರಕ್ತಮಠದ ಸೇವಾ ಕಾರ್ಯ ಮೆಚ್ಚಿ ದೇಣಿಗೆ ನೀಡುವ ಕಾರ್ಯ ಮಾಡಿದ್ದಾರೆ. ಅವರ ಉದ್ದಿಮೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಅನಾಥ ಮತ್ತು ಬಡಮಕ್ಕಳ ಹಾರೈಕೆ ಎಂದು ಹೇಳಿದರು.

ಈ ವೇಳೆ ನೆಹರು ಬಿರಾದಾರ, ಲೋಕೇಶ ಹಣಮಶೆಟ್ಟಿ, ಸಂಜುಕುಮಾರ ಪಾಟೀಲ, ಶಿವಕುಮಾರ ಕೌಡಗಾವೆ, ಡಾ. ಪರಮೇಶ್ವರ ಬಿರಾದಾರ, ನಾಗಶೆಟ್ಟಿ ಕಾರಮುಂಗೆ, ರಾಜು ಲಾಂಡಗೆ, ರಾಜು ಬಿರಾದಾರ, ಖಂಡು ಕಾಳೆ, ಅಂದಾನಯ್ಯ ಹಿರೇಮಠ, ನಿಂಗಪ್ಪ ಹೆಬಸೂರ, ದೇವೇಂದ್ರಪ್ಪ ಸಣ್ಣಬಾಳಪ್ಪನವರ, ಆರ್.ಬಿ. ಬಡಿಗೇರ, ಪಿ.ಎಚ್. ಪಾಟೀಲ ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Share this article