ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸುವರ್ಣಸೌಧದಲ್ಲಿ ಬುಧವಾರ ಜರುಗಿದ ನಮ್ಮಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಲೋಗೋ ವನ್ನು ವಿದ್ಯಾರ್ಥಿಗಳಿಂದ ಅನಾವರಣಗೊಳಿಸಿ, ದಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಜೊತೆಗೆ ದಾನಿಗಳು ಕೈಜೋಡಿಸಿದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಸರ್ಕಾರ ಹಾಗೂ ಅನುದಾನಿತ ಶಾಲೆಗಳಲ್ಲಿ ಅಂದಾಜು ₹56 ಲಕ್ಷ ವಿದ್ಯಾರ್ಥಿಗಳಿದ್ದು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಅಂದಾಜು ₹1 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮೂರು ಬಾರಿ ಅವಕಾಶ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು 82 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಲಾ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, ಈ ಹಿನ್ನೆಲೆ ಅಜಿಂ ಪ್ರೇಮಜಿ ಫೌಂಡೇಶನ್ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ವಾರದ ಎರಡು ದಿನ ಬದಲಾಗಿ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಿಸುವ ಕಾರ್ಯಕ್ಕೆ ಸೆ.25ರಂದು ಯಾದಗಿರಿಯಲ್ಲಿ ಚಾಲನೆ ನೀಡಲಾಗುವುದು ಎಂದರು.ಸರ್ಕಾರಿ ಶಾಲಾ ಮಕ್ಕಳಿಗೆ ಆರಂಭಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದೊಂದಿಗೆ 45 ಸಾವಿರ ಅತಿಥಿ ಶಿಕ್ಷಕರಿಗೆ ಶಾಲಾ ಪ್ರಾರಂಭಕ್ಕೂ ಮುನ್ನವೇ ನೇಮಕಾತಿ ಆದೇಶ ಪ್ರತಿ ನೀಡಲಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 1008 ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಲಾಗಿದೆ. ಕ್ರಮೇಣ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು.
ಸರ್ಕಾರಿ ಶಾಲೆಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಉನ್ನತ ಹುದ್ದೆ, ಸ್ಥಾನಮಾನ ಪಡೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರದಿಂದಲೇ ನೀಟ್, ಸಿಇಟಿ ಕೋಚಿಂಗ್ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲು ಶಿಕ್ಷಣ ಸಚಿವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನೀಡುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಕೈಜೋಡಿಸಿದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬಹುದಾಗಿದೆ ಎಂದರು.ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮಾತನಾಡಿ, ಶಿಕ್ಷಕರಿಗೆ ಹಳೇ ಪಿಂಚಣಿ ಯೋಜನೆ ಜಾರಿ, 7ನೆ ತರಗತಿ ನಂತರ 8, 9ನೇ ತರಗತಿಗಳಿಗೆ ಅನುಮತಿ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ಆಸೀಫ್(ರಾಜು) ಸೇಠ, ವಿಠ್ಠಲ ಹಲಗೇಕರ, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಹಲಗಾ, ಬಸ್ತವಾಡ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಿಗಜಪತಿ, ಮಹಾದೇವಿ ಪಾಟೀಲ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ ಸಿಂಗ್, ಆಯುಕ್ತೆ ಕಾವೇರಿ, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕಿ ಲೀಲಾವತಿ ಹಿರೇಮಠ, ಚಿಕ್ಕೋಡಿ ಉಪನಿರ್ದೆಶಕ ಬಿ.ಎ. ಮೇಕಲಮರಡಿ, ಡಯಟ್ ಉಪನಿರ್ದೆಶಕ ಬಸವರಾಜ ನಾಲತವಾಡ ಉಪಸ್ಥಿತರಿದ್ದರು.ಇದೇ ವೇಳೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ಶಾಲೆಗಳಿಗೆ ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು.ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ. ಸಮಾಜ, ದೇಶ ಬೆಳೆಯಬೆಕಾದರೆ ಸರ್ಕಾರಿ ಸ್ವಾಮ್ಯದ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಸರ್ಕಾರ ಸಾಕಷ್ಟು ಮಹತ್ವಾಕಾಂಕ್ಷೆ ಇಟ್ಟುಕೊಂಡು ಅನೇಕ ಯೋಜನೆ ರೂಪಿಸುತ್ತದೆ. ಈ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು.
-ಲಕ್ಷ್ಮೀ ಹೆಬ್ಬಾಳಕರ ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವೆ